ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪರಿಸರ ಸ್ನೇಹಿ ಕಾರ್ಯಕ್ರಮಗಳೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ನಾಲ್ಕನೇಯ ಬಾರಿಗೆ ರಾಷ್ಟ್ರಮಟ್ಟದ ಪ್ರತಿಷ್ಟಿತ ಗ್ರೀನ್ ಸ್ಕೂಲ್ ಅವಾರ್ಡನ್ನು ತನ್ನದಾಗಿಸಿಕೊಂಡು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಈ ಪ್ರಶಸ್ತಿಯನ್ನು ಪಡೆದ ಉಡುಪಿ ಜಿಲ್ಲೆಯ ಏಕೈಕ ಶಾಲೆ ಎಂಬ ಹಿರಿಮೆಗೆ ಪಾತ್ರವಾಯಿತು.
ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಂಟರ್ ಫಾರ್ ಸೈನ್ಸ್ ಮತ್ತು ಎನ್ವಿರಾನ್‌ಮೆಂಟ್ (ಸಿಎಸ್‌ಇ) ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ 9,000 ಕ್ಕೂ ಹೆಚ್ಚು ಶಾಲೆಗಳು ಸ್ಪಧೆಯಲ್ಲಿ ಭಾಗವಹಿಸಿದ್ದವು. ಶುದ್ಧ ಗಾಳಿ, ಇಂಧನ, ಆಹಾರ, ಭೂಮಿ, ನೀರು, ತ್ಯಾಜ್ಯದ ವ್ಯವಸ್ಥಿತ ನಿರ್ವಹಣೆಯ ಮಾನದಂಡದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಡೆಲ್ಲಿಯ ಇಂಡಿಯನ್ ಹೆಬಿಟ್ಯಾಟ್‌ನ ಸ್ಟೈನ್ ಅಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿದ್ದು, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮತ್ತು ಶಾಲೆಯ ಆಡಳಿತಾಧಿಕಾರಿ ವೀಣಾರಶ್ಮಿ ಎಮ್. ಸಮಾರಂಭದಲ್ಲಿ ಪಾಲ್ಗೊಂಡು, ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸೆಂಟರ್ ಫಾರ್ ಸೈನ್ಸ್ ಮತ್ತು ಎನ್ವಿರಾನ್‌ಮೆಂಟ್ (ಸಿಎಸ್‌ಇ)ನ ಮಹಾ ನಿರ್ದೇಶಕರಾದ ಸುನೀತಾ ನಾರಾಯಣ್ ಹಾಗೂ ಲಡಾಕ್‌ನ ಮುಖ್ಯ ಶಿಕ್ಷಣ ತಜ್ಞರು ಹಾಗೂ ಪರಿಸರವಾದಿಗಳಾದ ಸೋನಮ್ ವಾಂಗ್‌ಚಕ್ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಿಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಗ್ರೀನ್ ಸ್ಕೂಲ್ ಅವಾರ್ಡ್ ನಮ್ಮ ಸಂಸ್ಥೆಗೆ ಸಂದ ಅತ್ಯುನ್ನತ ಗೌರವವಾಗಿದ್ದು, ನಮ್ಮ ಸಂಸ್ಥೆಯಲ್ಲಿರುವ ಸುಸಜ್ಜಿತ ವ್ಯವಸ್ಥೆಗಳೇ ಈ ಪ್ರಶಸ್ತಿ ಪಡೆಯುವಲ್ಲಿ ಪ್ರಧಾನ ಪಾತ್ರ ವಹಿಸಿವೆ.
ನಮ್ಮ ಶಾಲೆಯಲ್ಲಿ ಅಳವಡಿಸಲಾಗಿರುವ ಸೋಲಾರ್ ಪವರ್ ಗ್ರಿಡ್‌ಗಳಿಂದ ಪ್ರಾಥಮಿಕ ಶಾಲೆಯ ಎಲ್ಲಾ ಕಾರ್ಯಚಟುವಟಿಕೆಗಳು ವ್ಯವಸ್ಥಿತವಾಗಿ ಸಾಗುತ್ತಿವೆ. ಮಳೆನೀರು ಕೊಯ್ಲಿನ ಮೂಲಕ ಮಳೆನೀರನ್ನು ಸಂಗ್ರಹಿಸಿ, ಅದು ಭೂಮಿಯೊಳಗೆ ಇಂಗುವಂತೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳೇ ಕೈದೋಟವನ್ನು ನಿರ್ಮಿಸಿದ್ದು, ಅಲ್ಲಿ ಬೆಳೆದಿರುವ ತರಕಾರಿಗಳನ್ನು ನಿತ್ಯದ ಅಡುಗೆಗೆ ಬಳಸಲಾಗುತ್ತಿದೆ. ನಮ್ಮಲ್ಲಿ ಸುವ್ಯವಸ್ಥಿತವಾಗಿ ಔಷಧಿಯ ಗಿಡಗಳನ್ನು ಬೆಳೆಸುತ್ತಿದ್ದು, ಅದಕ್ಕಾಗಿಯೇ ಪ್ರತ್ಯೇಕ ವನವನ್ನು ನಿರ್ಮಿಸಲಾಗಿದೆ. ಶೈಕ್ಷಣಿಕ ಚಟುವಟಿಕೆಗಳ ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತಾಗಿ ಮಾಹಿತಿ ಒದಗಿಸಿ, ಅವರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

