Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ ಸಂಪನ್ನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿಯ ಧರ್ಮದರ್ಶಿಗಳೂ ಮತ್ತು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ನಿರ್ಮಾತೃಗಳಾದ ದಿ. ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಸಂಸ್ಮರಣೆಯ ಅಂಗವಾಗಿ ಸಂಸ್ಥಾಪಕರ ದಿನಾಚರಣೆಯನ್ನು ಶುಕ್ರವಾರದಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಆರಾಧನೆ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಬದುಕು ಮತ್ತು ಸಾಧನೆಯ ವಿವಿಧ ಮಜಲುಗಳನ್ನು ಸಂಸ್ಮರಿಸಲಾಯಿತು. ಮುಂಜಾನೆಯ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲ್ಪಟ್ಟವು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಪೋಷಕರನ್ನುಉದ್ದೇಶಿಸಿ ಮಾತನಾಡಿ, ವ್ಯಕ್ತಿಯೊಬ್ಬ ಬದುಕಿದ್ದ ಅವಧಿ ಎಷ್ಟು ಎನ್ನುವುದಕ್ಕಿಂತ ಆತ ಬದುಕಿದ್ದ ರೀತಿ ಹೇಗಿತ್ತು? ಸಮಾಜಕ್ಕೆ ಆತ ನೀಡಿದ ಕೊಡುಗೆ ಏನು? ಎನ್ನುವುದು ಬಹಳ ಮುಖ್ಯ. ಹೂವು ಪರಮಾತ್ಮನ ಪಾದ ಸೇರಿ ಸಾರ್ಥಕ ಪಡೆಯುವಂತೆ, ವೇದಮೂರ್ತಿ ಹೆಚ್. ರಾಮಚಂದ್ರಭಟ್ಟರು ಸಮಾಜದ ಹಿತಕ್ಕಾಗಿ ದುಡಿದು ಸಾರ್ಥಕವನ್ನು ಪಡೆದು, ಕೀರ್ತಿಶೇಷರಾದವರು ಎಂದರು.

ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡುವಂತಾಗಬೇಕು. ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಬೇಕು. ಅವರ ಭವಿಷ್ಯಕ್ಕೆ  ಭದ್ರ ಬುನಾದಿಯನ್ನು ಹಾಕಿಕೊಡಬೇಕು. ಅವರಿಗೆ ಬದುಕಲು ಬೇಕಾದ ಜ್ಞಾನ ಮತ್ತು ಕೌಶಲ್ಯವನ್ನು ಕಲಿಸಬೇಕು ಎಂಬಂತಹ ಉನ್ನತ ಆದರ್ಶಗಳನ್ನಿಟ್ಟುಕೊಡು ರಾಮಭಟ್ಟರು ಈ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರು ಕಂಡಿದ್ದ ಕನಸುಗಳೆಲ್ಲ ಕೈಗೂಡಿವೆ. ಇಲ್ಲಿಂದ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಇಂದು ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಆ ನಿಟ್ಟಿನಲ್ಲಿ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಬದುಕು ಸಾರ್ಥಕಗೊಂಡಿತು ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಮಣಿಪಾಲ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಜಿತ್ ಮಾತನಾಡುತ್ತಾ ವಸತಿ ಶಾಲೆಗಳು ನಮಗೆ ಜೀವನ ಶಿಕ್ಷಣವನ್ನು ನೀಡುತ್ತದೆ. ಬದುಕು ಬದಲಾಗುವ ಕ್ಷಣಗಳು ನಮಗೆ ವಸತಿ ನಿಲಯದಲ್ಲಿ ಸಿಗುತ್ತದೆ. ಕಿರಿಯರು ಹಿರಿಯರ ವ್ಯಕ್ತಿತ್ವವನ್ನು ನೋಡುತ್ತಾ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಶಾಲೆಯು ವಿದ್ಯಾರ್ಥಿಗಳಲ್ಲಿ ಪ್ರತಿ ವಿಚಾರಗಳ ಬಗ್ಗೆಯೂ ಕುತೂಹಲ ತಾಳುವಂತಹ ಸನ್ನಿವೇಶಗಳನ್ನು ಸೃಷ್ಟಿಸಬೇಕು. ಅವರಲ್ಲಿ ಪ್ರಶ್ನಿಸುವ ಕೌಶಲ್ಯಗಳನ್ನು  ಉತ್ತೇಜಿಸಬೇಕು. ಅವರಲ್ಲಿನ ಮೂಡುವ ಕುತೂಹಲವನ್ನು ನಿರ್ಲಕ್ಷಿಸಬಾರದು. ಗ್ರಾಮೀಣ ಭಾಗದಲ್ಲಿ ಇಂತಹ ಗುಣಮಟ್ಟದ ಶಿಕ್ಷಣಸಂಸ್ಥೆಯನ್ನು ನಿರ್ಮಿಸಿ, ಹಲವಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ರಾಮಚಂದ್ರ ಭಟ್ಟರ ಸಂಕಲ್ಪ ಮತ್ತು ಪರಿಶ್ರಮಕ್ಕೆ ವಂದನೆ ಎಂದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಮತ್ತು ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಆರನೆಯ ವರ್ಷದ ಸಂಸ್ಮರಣೆ ಇದು. ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರು ವಿಶೇಷ ಉದ್ದೇಶದೊಂದಿಗೆ ಈ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಿ, ಸಮಾಜಕ್ಕೆ ಕೊಡುಗೆ ನೀಡಿದರು. ಹಟ್ಟಿಅಂಗಡಿ ಎಂಬ ಈ ಊರು ಪುಟ್ಟ ಹಳ್ಳಿಯಾಗಿದ್ದರೂ ಒಂದು ಕಾಲದಲ್ಲಿ ಗೋಷ್ಠಪುರ ಎಂಬ ಹೆಸರಲ್ಲಿ ಕಲೆ, ಸಾಹಿತ್ಯ, ವ್ಯಾಪಾರ ಸಂಸ್ಕೃತಿಯ ವೈಭವಕ್ಕೆ  ಹೆಸರಾದ ತಾಣವಾಗಿತ್ತು.  ಮುಂದೆ ಕಾಲದ ಹೊಡೆತಕ್ಕೆ ಸಿಕ್ಕಿ ತನ್ನ ಗತವೈಭವವನ್ನು ಕಳೆದುಕೊಂಡು ಅಜ್ಞಾತವಾಗಿತ್ತು.  ಕಾಲ ಗತಿಸಿದಂತೆ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರು ಶ್ರೀ ಸಿದ್ಧಿವಿನಾಯಕನಿಗೆ ಪೂಜೆ, ಪುನಸ್ಕಾರ, ಪ್ರಾರ್ಥನೆಗಳನ್ನು ಅರ್ಪಿಸಿ, ತನ್ಮೂಲಕ ಈ ಕ್ಷೇತ್ರದ ಗತವೈಭವವನ್ನು ಮರಳಿ ಸ್ಥಾಪಿಸಿದರು.  ಅವರ  ತ್ಯಾಗ ಮತ್ತು ಪರಿಶ್ರಮದ ಪರಿಣಾಮವಾಗಿಯೇ ದೇವಾಲಯ ಮತ್ತು ವಿದ್ಯಾಲಯಗಳು ವಿವಿಧ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕೀರ್ತಿಯನ್ನು ಪಡೆದವು. ಸಿದ್ಧಿವಿನಾಯಕ ವಸತಿ ಶಾಲೆಯು ಇಂದು ಹಲವಾರು ವಿದ್ಯಾರ್ಥಿಗಳಿಗೆ ವಿಪುಲವಾದ ಜ್ಞಾನವನ್ನು ನೀಡುವಲ್ಲಿ ಕಾರ್ಯತತ್ಪರವಾಗಿದೆ. ಸಂಸ್ಥಾಪಕರ ಕಾರ್ಯನಿಷ್ಠೆ, ಸಮರ್ಪಣಾಭಾವದ ಸಂಕಲ್ಪವೇ ಸಂಸ್ಥೆಯ ಉನ್ನತಿಗೆ ಕಾರಣಶಕ್ತಿಯಾಗಿದೆ ಎಂದು  ಅಭಿಪ್ರಾಯಪಟ್ಟರು.

ಸಂಸ್ಥೆಯಲ್ಲಿ ನೂತನವಾಗಿ ಕಾರ್ಯಾಚರಿಸುತ್ತಿರುವ ಕಾಗದ ಮರುಬಳಕೆಯ ಘಟಕ ’ಪುನರಪಿ’, ಇಸ್ರೋ ವಾಲ್ ಮ್ಯೂಸಿಯಂ ’ಪುಷ್ಪಕ’. ಹೊರಾಂಗಣ ವ್ಯಾಯಾಮ ಕೇಂದ್ರ ’ ಘಟೋತ್ಕಚ’ ಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ದಿನಗಳ ಕಾಲ ನಡೆದ ರಾಷ್ಟ್ರಮಟ್ಟದ ಸ್ಕೌಟ್ ಮತ್ತು ಗೈಡ್ಸ್‌ನ ವಜ್ರಮಹೋತ್ಸವದ  ಜಾಂಬೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಸ್ಥೆಯ ಸ್ಕೌಟ್ ಮತ್ತು ಗೈಡ್‌ನ ವಿದ್ಯಾರ್ಥಿಗಳು ಹಾಗೂ ಶಿಕಕ್ಷರನ್ನು, 2024- 25 ನೇ ಸಾಲಿನ ಗ್ರೀನ್ ಸ್ಕೂಲ್ ಮತ್ತು ಗ್ರೀನ್ ಫ್ಲಾಗ್ ಅವಾರ್ಡ್ ಪಡೆಯಲು ಶ್ರಮಿಸಿದ ಸಂಸ್ಥೆಯ ಪ್ರಾಂಶುಪಾಲರು,

ಆಡಳಿತಾಧಿಕಾರಿಗಳು ಹಾಗೂ ಶಿಕ್ಷಕರನ್ನು, ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ರಿಷಿಕಾ ದೇವಾಡಿಗ ಹಾಗೂ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ ಅದಿತಿ ನಾವಡರನ್ನು ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್ಟರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಅವಧಿಯಲ್ಲಿಯೇ ಜೀವನ ಕೌಶಲ್ಯಗಳನ್ನು ಕಲಿಸಬೇಕು. ಅವರಲ್ಲಿ ವಿಶೇಷ ಸಾಧನೆಯನ್ನು ಸಾಧಿಸುವ ಛಲವನ್ನು ಮೂಡಿಸಬೇಕು. ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸಬೇಕು. ಈ ಸಂಕಲ್ಪ ಪೂರ್ಣಗೊಳ್ಳಲು ಸರ್ವರ ಸಹಕಾರ ಅತ್ಯಗತ್ಯ ಎಂದರು.

ಸಂಸ್ಥಾಪಕರ ಧರ್ಮಪತ್ನಿ ರಮಾದೇವಿ ಆರ್ ಭಟ್, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ರಿಜಿಸ್ಟಾರ್ ಆದ ಎನ್.ಪಿ. ನಾರಾಯಣ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲೆಯ ಸಂಯೋಜಕರಾದ ಶ್ರುತಿ ಶೆಟ್ಟಿ ಸ್ವಾಗತಿಸಿದರು, ಪ್ರೌಢಶಾಲೆಯ ಸಂಯೋಜಕರಾದ ಸವಿತಾ ಭಟ್ ವಂದಿಸಿದರು, ಶಿಕ್ಷಕರಾದ ಸಚಿನ್ ಹೆಚ್ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್,  ಪೋಷಕರು, ಭಕ್ತ ವೃಂದದವರು, ಶಿಕ್ಷಕ-ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version