Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ವಿದ್ಯಾರ್ಥಿ ಸಿರಿ: ಭಾಷೆಯಲ್ಲಿ ಕೀಳು ಮೇಲೆಂಬುದಿಲ್ಲ: ಕು. ಶಾಲಿನಿ ಎಕ್ಕಾರು

ಮೂಡಬಿದಿರೆ: ಯಾವ ಭಾಷೆಯೂ ಮೇಲಲ್ಲ, ಯಾವ ಭಾಷೆಯೂ ಕೀಳಲ್ಲ ಆದರೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ನಮ್ಮ ಮಾತೃಭಾಷೆಯೇ ಮೂಲ. ಯಾವುದೇ ವಿಚಾರವು ನಮ್ಮ ಹೃದಯವನ್ನು ತಟ್ಟಿ, ಮನಸ್ಸನ್ನು ಸೇರಿ, ಬುದ್ಧಿಯ ಮೂಲಕ ಚೈತನ್ಯಶೀಲಗೊಳಿಸುವ ಶಕ್ತಿ ನಮ್ಮ ಮಾತೃಭಾಷೆಗಿದೆ. ಕನ್ನಡ ಭಾಷೆಯನ್ನು ಆಸ್ವಾದಿಸಲು ಕಲಿಸುವ ಮೂಲಕ ಮಾತೃಭಾಷೆಯನ್ನು ಪ್ರೀತಿಸುವಂತೆ ಮಾಡಿ ಅದರ ಕಡೆಗೆ ಒಲವು ತೋರಿಸಲು ಸಾಧ್ಯ ಎಂದು ಸಂತ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಶಾಲಿನಿ ಎಕ್ಕಾರು ಹೇಳಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿದ್ಯಾರ್ಥಿ ಸಿರಿ -2015 ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡವು ತನ್ನ ಕಂಪು ಹಾಗೂ ಇಂಪಿನಿಂದ ಹಲವಾರು ಕವಿಗಳನ್ನು, ಸಾಹಿತಿಗಳನ್ನು ತನ್ನೆಡೆಗೆ ಆಕರ್ಷಿಸಿದೆ. ಕನ್ನಡದ ಈ ಸೊಬಗಿನಿಂದ ಅದು ಕರುನಾಡ ಜನರ ಅತ್ಯಮೂಲ್ಯ ಸಂಪತ್ತಾಗಿದೆ. ಆದ್ದರಿಂದಲೇ ಅದನ್ನು ಸಿರಿಗನ್ನಡ, ಸಿರಿನುಡಿ ಎಂದು ಹಲವಾರು ಕವಿಗಳು ಕರೆದಿರುವರು. ಕನ್ನಡದಲ್ಲೊಂದು ಅಪೂರ್ವ ಶಕ್ತಿಯಿದೆ. ತನ್ನೆಡೆಗೆ ಆಕರ್ಷಿಸುವ, ಜನರ ಮನದ ಬಾಗಿಲ ತಟ್ಟುವ, ಕಿವಿಯನ್ನು ಇಂಪಾಗಿಸುವ, ಮನವನ್ನು ತಂಪಾಗಿರಿಸುವ ಶಕ್ತಿ ಕನ್ನಡದ್ದು. ಇಂತಹ ಸೊಗಸಾದ ಭಾಷೆಗೆ ಕ್ರಿ.ಶ. 450ರ ಹಲ್ಮಿಡಿ ಶಾಸನದಿಂದ ಇಂದಿನವರೆಗೆ ಸುಮಾರು ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಹೀಗೆ ಹಿರಿದಾದ ಇತಿಹಾಸ, ಸೊಬಗನ್ನು ಒಳಗೊಂಡಿರುವ ಕನ್ನಡವನ್ನು ಆಸ್ವಾದಿಸುವ ಬಗೆಯನ್ನು ಇಂದಿನ ವಿದ್ಯಾರ್ಥಿಗಳು ಮರೆತಿದ್ದಾರೆ. ತಾವು ಓದಿದ್ದನ್ನು ಮನನ ಮಾಡಿಕೊಂಡು ಆಸ್ವಾದಿಸುವ ರಸಿಕತೆ ಇಂದಿನ ಯುವಪೀಳಿಗೆಯಲ್ಲಿ ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಎಂಬ ಹೆಮ್ಮರದ ಸೊಬಗನ್ನು ಆಸ್ವಾದಿಸಿ ನೀರೆರೆಯುವ ಕವಿ ಹೃದಯವನ್ನು ಇಂದಿನ ಯುವಜನತೆಯ ಮನದಲ್ಲಿ ಬಿತ್ತಬೇಕಾದ ಅವಶ್ಯಕತೆಯಿದೆ ಎಂದವರು ಹೇಳಿದರು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತ್ರಿ ಪುರಸ್ಕೃತ ನಿರ್ದೇಶಕ ಪಿ. ಶೇಷಾದ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿಯನ್ನು ಸಾಗರ ಕಿನ್ನರ ಮೇಳ ತುಮರಿಯ ನಿರ್ದೇಶಕ ಕೆ. ಜಿ. ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಟಿ. ಎಸ್. ನಾಗರಾಜ್ ಶೆಟ್ಟಿ ತಿಪಟೂರು ಹಾಗೂ ವಿದ್ಯಾರ್ಥಿ ಪ್ರತಿಭೆ ಝಿ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ ವಿಜೇತ ಮಾ. ಗಗನ್. ಜಿ. ಗಾವ್ಕರ್ ಅವರಿಗೆ ಪ್ರದಾನಿಸಲಾಯಿತು.

ಅಧ್ಯಕ್ಷರ ಭಾಷಣದ ಮುಂದುವರಿದ ಭಾಗ:
ಕನ್ನಡ ಎಂಬ ಭಾಷೆಯು ಹಲವು ವಿಶಿಷ್ಟ ಭಾರತೀಯ ಭಾಷೆ ಸಂಸ್ಕೃತಿ ಹಾಗೂ, ಪರಂಪರೆಗಳ ಪ್ರತೀಕವಾಗಿದೆ. ಉದಾಹರಣೆಗೆ-ಕನ್ನಡವು ವಿವಿಧ ಪ್ರದೇಶಗಳಲ್ಲಿ ವಿವಿಧ ರೂಪಗಳಲ್ಲಿ ಪ್ರಸ್ತುತವಾಗಿದೆ. ಧಾರವಾಡದಲ್ಲಿ ಧಾರವಾಡ ಕನ್ನಡ, ದಕ್ಷಿಣ ಕನ್ನಡದಲ್ಲಿ ಮತ್ತು ಉಡುಪಿಗಳಲ್ಲಿ ಮಂಗಳೂರು ಕನ್ನಡ, ಕುಂದಾಪುರದಲ್ಲಿ ಕುಂದಗನ್ನಡ ಇತ್ಯಾದಿ. ಆದರೂ ಕನ್ನಡ ಎಂಬುದು ಒಂದೇ ಎಂಬ ಮನೋಭಾವ ಕನ್ನಡಿಗರಲ್ಲಿದೆ. ಇದು ಭಾರತದಲ್ಲಿನ ವಿವಿಧತೆಯಲ್ಲಿ ಏಕತೆ ಎಂಬ ಸಂಸ್ಕೃತಿಯ ದ್ಯೋತಕವಾಗಿದೆ.

ಆದ್ದರಿಂದ ಕನ್ನಡದ ಬಗೆಗಿನ ಒಲವು ಭಾರತೀಯ ಸಂಸ್ಕೃತಿಯ ಬಗೆಗಿನ ಒಲವಿನಲ್ಲಿ ಪರಿಣಮಿಸುತ್ತದೆ. ಈ ದೃಷ್ಟಿಯಿಂದ ಕನ್ನಡ ಸಾಹಿತ್ಯದಲ್ಲಿನ ಮಕ್ಕಳ ಅಭಿರುಚಿಯನ್ನು, ಅದನ್ನು ಆಸ್ವಾದಿಸುವ ಕಲೆಯನ್ನು ಕಲಿಸುವ ಮೂಲಕ ಪ್ರಾರಂಭಿಸಬೇಕಾಗುತ್ತದೆ. ನಮ್ಮ ಶೈಕ್ಷಣಿಕ ಪದ್ಧತಿಯಲ್ಲಿ ಮಕ್ಕಳಿಗೆ ಕನ್ನಡ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅದನ್ನು ಆಸ್ವಾದಿಸುವ ಬಗೆಯನ್ನು ತಿಳಿಹೇಳಬೇಕಾಗಿದೆ.

ಇಂದು ಹಲವಾರು ಕಾರಣಗಳಿಂದ ಕನ್ನಡವು ಕನ್ನಡಿಗರಿಂದಲೇ ದೂರವಾಗುತ್ತಿದೆ. ಇದನ್ನು ನಾನು ಶಾಲಾ ಪರಿಸರಗಳಲ್ಲಿ ಗಮನಿಸಿದ್ದೇನೆ. ಆಂಗ್ಲ ಮಾಧ್ಯಮಗಳಲ್ಲಿ ಕನ್ನಡಪರ ದೃಷ್ಠಿಕೋನವೇ ಇಲ್ಲವಾಗಿದೆ. ಕನ್ನಡ ಮಾಧ್ಯಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೊಂದಿಗೆ ಕನ್ನಡದಿಂದ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂಬ ಆತ್ಮವಿಶ್ವಾಸ ಹುಟ್ಟಿಸುವ ಚಟುವಟಿಕೆಗಳು ಕಾಣೆಯಾಗಿವೆ. ಇದರಿಂದಲೇ ಶಾಲೆಗಳಲ್ಲಿ ಕನ್ನಡವನ್ನು ಉಳಿಸುವ, ಬೆಳೆಸುವ, ಆಸಕ್ತಿ ಮೂಡಿಸುವ, ಪರಿಸರ ನಿರ್ಮಾಣದ ಬಗ್ಗೆ ನಾವೆಲ್ಲಾ ಯೋಚಿಸಬೇಕಾಗಿದೆ.

ನಾನು ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವೆನಾದರೂ ನನ್ನ ಮೊದಲ ಪ್ರೀತಿ ಕನ್ನಡಕ್ಕೆ ಸಲ್ಲುತ್ತದೆ. ಯಾಕೆಂದರೆ ಕನ್ನಡ ಭಾಷೆ ನನ್ನ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿದೆ. ನನ್ನಲ್ಲಿ ಕನ್ನಡ ಪ್ರೇಮ ಹುಟ್ಟಲು ಎರಡು ಸಂಗತಿಗಳು ಮುಖ್ಯವಾಗುತ್ತದೆ. ಒಂದು, ನನ್ನ ಶಾಲೆಯ ವಾತಾವರಣ, ಇನ್ನೊಂದು ನನ್ನ ಮನೆಯ ಪರಿಸರ. ನನ್ನ ಶಾಲೆ ಆಂಗ್ಲ ಮಾಧ್ಯಮವಾದರೂ ಒಂದನೇ ತರಗತಿಯಿಂದ ಧಾರಾಳವಾಗಿ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದೆ. ತರಗತಿ ಬಿಟ್ಟರೆ ಹೊರಗಡೆಗಳಲ್ಲಿ ನಾವು ಹೆಚ್ಚಾಗಿ ಕನ್ನಡ-ತುಳು ಮಾತನಾಡುತ್ತೇವೆ. ಸಾಕಷ್ಟು ಕನ್ನಡ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಶಾಲೆಯ ಈ ಮುಕ್ತ ವಾತಾವರಣ ನನ್ನಲ್ಲಿ ಇಂಗ್ಲೀಷಿಗಿಂತ ಕನ್ನಡವನ್ನು ಹೆಚ್ಚು ಪ್ರೀತಿಸುವಂತೆ ಮಾಡಿದೆ. ನನ್ನ ತಂದೆ-ತಾಯಿಯರಿಬ್ಬರೂ ಕನ್ನಡ ಶಿಕ್ಷಕರಾಗಿರುವುದರಿಂದ ಮನೆಯಲ್ಲಿ ಸಹಜವಾಗಿಯೇ ಕನ್ನಡದ ವಾತಾವರಣವಿತ್ತು.
ಪಂಪ-ರನ್ನ-ಜನ್ನ-ನಾಗಚಂದ್ರ-ವಚನಕಾರರು-ಕುಮಾರವ್ಯಾಸ-ಸರ್ವಜ್ಞ, ಮುದ್ದಣ, ಕುವೆಂಪು, ಬೇಂದ್ರೆ, ಕಾರಂತರು, ಅಡಿಗ, ಗೋಕಾಕ್, ಅನಂತಮೂರ್ತಿ, ಕಾರ್ನಾಡ, ಕಂಬಾರ, ಹೀಗೆ ಕನ್ನಡದ ಮಹಾಚೇತನಗಳ ಪರಿಚಯವಾಯಿತು. ಹಳೆಗನ್ನಡದ ಇಂಪು, ನಡುಗನ್ನಡದ ಪೆಂಪು, ಹೊಸಗನ್ನಡದ ತಂಪು ಎಲ್ಲವನ್ನು ಸ್ವಲ್ಪಮಟ್ಟಿಗೆ ಆಸ್ವಾದಿಸುವ ಅವಕಾಶ ಲಭ್ಯವಾಯಿತು. ಹಲ್ಮಿಡಿ ಶಾಸನದಿಂದ ಆರಂಭಿಸಿ, ನವೋದಯ, ನವ್ಯ, ದಲಿತ-ಬಂಡಾಯ, ನವ್ಯೋತ್ತರ ಹೀಗೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ-ಸಂಸ್ಕೃತಿಯ ಭವ್ಯ ಪರಂಪರೆಯ ಅರಿವು ನನ್ನಂಥ ವಿದ್ಯಾರ್ಥಿಗಳನ್ನು ರೋಮಾಂಚನಗೊಳಿಸುತ್ತದೆ. ಆದರೆ ಅದರ ಅರಿವು ಮೂಡಿಸುವವರು ಯಾರು? ಹೇಗೆ? ಎಂಬ ಮಹತ್ವದ ಪ್ರಶ್ನೆ ನಮ್ಮ ಮುಂದಿದೆ.

ನಾನು ಮೇಲಿನ ಘಟನೆಗಳನ್ನು ಉಲ್ಲೇಖಿಸಲು ಕಾರಣ ಶಾಲೆಯ ವಾತಾವರಣದಲ್ಲಿ ಕನ್ನಡದ ಆಸಕ್ತಿ ಮೂಡಿಸಲು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬುದನ್ನು ಒತ್ತಿಹೇಳುವುದಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುವ ಕುರಿತಾಗಿ ಸರಕಾರ ಮತ್ತು ಕನ್ನಡ ಪರ ಸಂಸ್ಥೆಗಳ ಮಟ್ಟದಲ್ಲಿ ಚರ್ಚೆ ನಡೆಯಬೇಕಾಗಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಖಚಿತ ಮಾರ್ಗದರ್ಶನವನ್ನು ಮಾಡಬೇಕಾಗಿದೆ. ಆಂಗ್ಲ ಮಾಧ್ಯಮಗಳಲ್ಲಿ ಕನ್ನಡ ಅನುಷ್ಠಾನದ ಕುರಿತಾಗಿ ಸಮಾಜವು ಹಕ್ಕೊತ್ತಾಯ ಮಾಡಬೇಕಾದ ಅನಿವಾರ್ಯತೆಯಿದೆ. ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದಲ್ಲದೆ ಕನ್ನಡ ಕಲಿಕೆಯ ಮೂಲಕ ಬದುಕುಕಟ್ಟಿಕೊಳ್ಳಲು ಸಾಧ್ಯ ಎಂಬ ಆತ್ಮವಿಶ್ವಾಸವನ್ನು ಮೂಡಿಸುವ ಚಟುವಟಿಕೆಗಳನ್ನು ರೂಪಿಸಬೇಕಾಗಿದೆ. ಅದು ಶೂನ್ಯದಿಂದ ಮೂಡಿಬರಲು ಸಾಧ್ಯವಿಲ್ಲ. ಪ್ರಜ್ಞಾಪೂರ್ವಕವಾಗಿ ಕನ್ನಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಆಳ್ವಾಸ್ ಪರಿಸರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇಲ್ಲಿನ ಕನ್ನಡ ಸಾಂಸ್ಕೃತಿಕ ಪರಿಸರದಿಂದಾಗಿ ಯಾವುದೇ ಮಾಧ್ಯಮದಲ್ಲಿ ಕಲಿತರೂ ಕನ್ನಡಾಭಿಮಾನವನ್ನು ಮೂಡಿಸಿಕೊಳ್ಳಲು ಸಾಧ್ಯವಿಲ್ಲವೇ? ಹಾಗೆಯೇ ಎಲ್ಲಾ ಶಾಲೆಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಕನ್ನಡ-ಸಂಸ್ಕೃತಿ ಪರಿಸರ ನಿರ್ಮಾಣವಾಗಬೇಕು.

2ನೇ ಶತಮಾನದಲ್ಲಿ ಕನ್ನಡದ ಮೊದಲ ಗ್ರಂಥ ‘ಕವಿರಾಜಮಾರ್ಗ’ದಲ್ಲಿ ಕನ್ನಡಿಗರನ್ನು ‘ವಿವೇಕಿಗಳು’ ಎಂದು ಕರೆದಿದ್ದಾನೆ. ಆದರೆ ಜಾಗತೀಕರಣದ ತೋಳ ತೆಕ್ಕೆಗೆ ಸಿಕ್ಕಿದ ಕನ್ನಡಿಗರು ಕನ್ನಡದ ‘ವಿವೇಕ’ವನ್ನು ಕಳೆದುಕೊಂಡಿದ್ದಾರೆಯೇ? ಎಂಬ ಸಂಶಯ ಮೂಡುತ್ತಿದೆ. ಮೊದಲ ಪಾಠಶಾಲೆಯಾದ ಮನೆಯಲ್ಲಿ ಕನ್ನಡ-ತುಳು, ಕೊಂಕಣಿ, ಬ್ಯಾರಿ ಭಾಷೆಯಂತಹ ಮಾತೃಭಾಷೆಯ ಬಗ್ಗೆ ಅಭಿಮಾನ ಮೂಡಿಸುವುದು ಮೊದಲ ಗುರುವಾದ ಜನನಿ ಹಾಗೂ ಪಾಲಕರ ಕರ್ತವ್ಯವಾಗಿದೆ. ಮನೆಯ ಹಂತದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಭವ್ಯ ಇತಿಹಾಸ ಮತ್ತು ಮೇರು ಕವಿ, ಸಾಹಿತಿ ಕೃತಿಗಳನ್ನು ಪರಿಚಯಿಸಿದರೆ ಆ ಭಾಷೆಯ ಬಗ್ಗೆ ಅಭಿಮಾನ ಹುಟ್ಟಲು ಸಾಧ್ಯ. ನಮ್ಮಲ್ಲಿ ಭಾಷೆಯ ಕುರಿತ ಭಾವನಾತ್ಮಕ ಸಂಬಂಧವನ್ನು ರೂಪಿಸಲು ಇದರಿಂದ ಸಾಧ್ಯ. ಮನೆ-ಶಾಲೆ-ಸಮಾಜದಲ್ಲಿ ಕನ್ನಡದ ಪ್ರೀತಿ ಹುಟ್ಟಿಸುವ ಕಾರ್ಯಕ್ರಮಗಳು ಇಂದು ಅಗತ್ಯವಾಗಿ ರೂಪಿಸಿಕೊಳ್ಳಬೇಕಾಗಿದೆ.

ಕನ್ನಡ ಭಾಷೆ ಕಡ್ಡಾಯವಾಗಲಿ:
ಇಂಗ್ಲೀಷ್ ಮಾಧ್ಯಮಗಳ ದಾಳಿಗೆ ನಲುಗಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ನಾನು ಒಂದೆರಡು ಮಾದರಿ ಕನ್ನಡ ಮಾಧ್ಯಮ ಶಾಲೆಗಳನ್ನು ಗಮನಿಸಿದ್ದೇನೆ. ಉಡುಪಿಯ ಒಳಕಾಡಿನ ಸರಕಾರಿ ಪ್ರೌಢಶಾಲೆ ಕನ್ನಡ ಮಾಧ್ಯಮ ಶಾಲೆಯು ಆಂಗ್ಲ ಮಾಧ್ಯಮ ಶಾಲೆಗಳಷ್ಟೇ ಸಶಕ್ತವಾಗಿದೆ ಎಂಬುದಕ್ಕೆ ಒಳ್ಳೆಯ ಉದಾಹರಣೆ. ನಾನು ಕಲಿಯುತ್ತಿರುವ ಸಂತ ಸಿಸಿಲಿ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆ ಕೂಡ ಒಂದು ಉತ್ತಮ ಮಾದರಿ ಶಾಲೆ. ಕನ್ನಡ ಮಾಧ್ಯಮ ಶಾಲೆಗಳು ಸಶಕ್ತವಾಗಿದ್ದರೆ ಆಂಗ್ಲ ಮಾಧ್ಯಮದ ದಾಳಿಯನ್ನು ಪ್ರಬಲವಾಗಿ ಎದುರಿಸಲು ಸಾಧ್ಯ ಎಂಬುದನ್ನು ಇಂತಹ ಉದಾಹರಣೆಗಳಿಂದ ಕಂಡುಕೊಳ್ಳಬಹುದು. ಕನ್ನಡ ಶಾಲೆಗಳನ್ನು ಸಶಕ್ತಗೊಳಿಸುವ ಪ್ರಯತ್ನವನ್ನು ಸರಕಾರ-ಸಮಾಜ ಒಟ್ಟಾಗಿ ಮಾಡಬೇಕಾದ ಅಗತ್ಯವಿದೆ.

ಇಂದು ಕನ್ನಡ ಮಾಧ್ಯಮವನ್ನು ಬಿಟ್ಟರೆ, ಎಲ್ಲೂ ಕನ್ನಡ ಕಲಿಕೆ ಕಡ್ಡಾಯವಲ್ಲ. ಪ್ರಾಥಮಿಕ ಮಟ್ಟದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಸರಕಾರದ ಪ್ರಯತ್ನವೂ ಕಾನೂನಿನ ತೊಡಕಿನಿಂದಾಗಿ ಅನುಷ್ಠಾನಗೊಂಡಿಲ್ಲ. ಇದು ಮುಂದಿನ ದಿನಗಳಲ್ಲಿ ಅಪಾಯವನ್ನು ತಂದೊಡ್ಡುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ಕರ್ನಾಟಕದಲ್ಲಿ ಕನ್ನಡವನ್ನು ಎಲ್ಲಾ ಹಂತದಲ್ಲೂ ಕನಿಷ್ಠ ಒಂದು ಭಾಷೆಯಾಗಿಯಾದರೂ ಕಡ್ಡಾಯವಾಗಿ ಅನುಷ್ಠಾನಗೊಳಿಸುವತ್ತ ಸರಕಾರ, ಸಮಾಜ ದೃಢ ಸಂಕಲ್ಪ ಮಾಡಬೇಕಾಗಿದೆ.

ರಂಗಭೂಮಿ-ಯಕ್ಷಗಾನ ಕನ್ನಡ ಬೆಳೆಸುವ ದಾರಿ
ನಾನು ಹರಿಕಥೆಯೊಂದನ್ನು ಕೇಳುವಾಗ ದಾಸರೊಬ್ಬರು ಹೀಗೆ ಹೇಳಿದರು-“ನಮ್ಮಲ್ಲಿ ಕನ್ನಡ ಭಾಷೆಯನ್ನು ಮನೆಮನೆಗೆ ಕೊಂಡೊಯ್ಯುವ ಕೆಲಸವನ್ನು ಹರಿಕಥೆ-ಯಕ್ಷಗಾನ-ಬಯಲಾಟ-ತಾಳಮದ್ದಲೆಗಳು ಪ್ರಾಚೀನ ಕಾಲದಿಂದಲೂ ಮಾಡಿವೆ. ಕುಮಾರವ್ಯಾಸ ಭಾರತದಂತಹ ಮಹಾಕಾವ್ಯಗಳು, ಜನರನ್ನು, ಮನೆಮನಗಳ ಬಾಗಿಲು ತಟ್ಟಿದ್ದು, ಗಮಕವಾಚನ, ಹರಿಕಥೆ, ಯಕ್ಷಗಾನಗಳ ಮೂಲಕ”. ಇದಕ್ಕೆ ರಂಗಭೂಮಿಯನ್ನೂ ಸೇರಿಸಬಹುದಾಗಿದೆ. ಇದು ಜನರಿಗೆ ಅನೌಪಚಾರಿಕ ಶಿಕ್ಷಣವನ್ನು ನೀಡಿವೆ. ಒಂದು ಉದಾಹರಣೆಯನ್ನು ನೀಡುವುದಾದರೆ ನಾನು ಕಂಡ ಮಹಾಭಾರತಕ್ಕೆ ಸಂಬಂಧಿಸಿದ ನಾಟಕಗಳಾದ ‘ಭೀಮಾಯಣ’ ಮತ್ತು ‘ಕರ್ಣಾಂತರಂಗ’ಗಳು ಮಹಾಭಾರತ ಕಥೆಗಳ ಕುರಿತಾಗಿ ಕುತೂಹಲ ಮೂಡಿಸಲು ಸಾಧ್ಯವಾಯಿತು.

ರಾಮಾಯಣ, ಮಹಾಭಾರತಗಳು ಭಾರತೀಯ ಕಾವ್ಯ ಪರಂಪರೆಯ ಎರಡು ಮಹಾ ಶಿಖರಗಳು. ಕಥೆ-ಉಪಕಥೆಗಳು ಬಿಚ್ಚಿಕೊಳ್ಳುತ್ತಾ ಅವು ನಮ್ಮನ್ನು ವಿಸ್ಮಯ ಲೋಕಕ್ಕೆ ತಳ್ಳುತ್ತವೆ. ವಿಮರ್ಶಾ ಲೋಕಕ್ಕೆ ಇಳಿಸುತ್ತವೆ. ಉದಾಹರಣೆಗೆ ನಾನು ಅಭಿನಯಿಸಿದ ಖ್ಯಾತ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರ ‘ಮಹಿಳಾ ಭಾರತ’ ಎಂಬ ನಾಟಕವು ಮಹಾಭಾರತದ ಹಲವು ಸನ್ನಿವೇಶಗಳನ್ನು ಪರಿಚಯಿಸಿತು. ನಟನೊಬ್ಬ ತನ್ನ ಪಾತ್ರವನ್ನು ಪರಿಣಾಮಕಾರಿಯಾಗಿಸಬೇಕಾದರೆ ಕಥೆಯ ಮೂಲವನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಈ ನಾಟಕಕ್ಕಾಗಿ ಮಹಾಭಾರತದ ಹಲವು ಸನ್ನಿವೇಶಗಳನ್ನು ಓದಬೇಕಾದ, ಕೇಳಬೇಕಾದ ಅನಿವಾರ್ಯತೆ ನನಗುಂಟಾಯಿತು. ಡಾ. ಶ್ರೀಪಾದ ಭಟ್‍ರವರ ನಿರ್ದೇಶನದಲ್ಲಿ ನಡೆದ ಶಿಬಿರವೇ ಒಂದು ಉತ್ತಮ ಪಾಠಶಾಲೆಯಂತಿತ್ತು. ಮಹಾಭಾರತದ ಕಥೆಗಳೊಂದಿಗೆ ಪುರಾಣ ಕಥೆಗಳನ್ನು ಭಿನ್ನ ರೀತಿಯಲ್ಲಿ ನೋಡುವ ಸಾಧ್ಯತೆಗಳನ್ನು ಅದು ನನ್ನ ಮುಂದಿರಿಸಿತು. ಮಹಾಭಾರತದಲ್ಲಿ ಬರುವ ಎಲ್ಲಾ ಹೆಣ್ಣು ಮಕ್ಕಳ ಬದುಕಿನ ಆಳದಲ್ಲಿ ಹುದುಗಿರುವ ದುರಂತವನ್ನು ಈ ನಾಟಕವು ಎಳೆ ಎಳೆಯಾಗಿ ಅನಾವರಣಗೊಳಿಸಿತು. ಕುಂತಿ, ಗಾಂಧಾರಿ, ಅಂಬೆ, ದ್ರೌಪದಿ, ಸುಭದ್ರೆ, ಉತ್ತರೆ ಹೀಗೆ ವಿವಿಧ ಸ್ತ್ರೀ ಪಾತ್ರಗಳನ್ನು ಆಳವಾಗಿ, ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಯಿತು. ಇದು ಯಾವುದೇ ಒಂದು ಘಟನೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಸಾಧ್ಯತೆಯನ್ನು ನನ್ನ ಮುಂದಿರಿಸಿತು.

ನಾನು ನೋಡಿರುವ, ಭಾಗವಹಿಸಿರುವ ಯಕ್ಷಗಾನಗಳು ಹಾಗೆ. ಉದಾಹರಣೆಗೆ ಖ್ಯಾತ ಭಾಗವತರಾದ ಶ್ರೀ ಸದಾನಂದ ಐತಾಳರ ನಿರ್ದೇಶನದ ‘ಗದಾಯುದ್ಧ’ದಲ್ಲಿ ದುರ್ಯೋಧನನ ಪಾತ್ರ ವಹಿಸುವ ಅವಕಾಶ ನನಗೆ ಲಭಿಸಿದೆ. ಇದು ದುರ್ಯೋಧನ ಒಬ್ಬ ದುಷ್ಟ ಎನ್ನುವುದಕ್ಕಿಂತ ಭಿನ್ನವಾದ ಒಂದು ಚಿಂತನೆಯನ್ನು ನನ್ನಲ್ಲಿ ಹುಟ್ಟುಹಾಕಿತು. ಇಡೀ ಮಹಾಭಾರತದ ಕಥೆಯನ್ನು ವೈಚಾರಿಕ ನೆಲೆಯಲ್ಲಿ ಚಿಂತಿಸಲು ಈ ಯಕ್ಷಗಾನದಲ್ಲಿ ಭಾಗವಹಿಸುವಿಕೆ ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಂಥ ಮಹಾನ್ ಕಲಾವಿದರ ಪಾತ್ರಗಳು ಪ್ರೇರೇಪಿಸಿದವು. ಇದಕ್ಕಿಂತಲೂ ಮುಖ್ಯವಾಗಿ ಕನ್ನಡ ಭಾಷೆಯ ಸೊಬಗು ಹಲವು ಯಕ್ಷಗಾನ ಮತ್ತು ನಾಟಕಗಳ ಮೂಲಕ ನನ್ನ ಮನಸ್ಸನ್ನು ಪ್ರವೇಶಿಸಿದೆ. ಸ್ವಲ್ಪ ಮಟ್ಟಿಗಾದರೂ ನನ್ನ ಕನ್ನಡವನ್ನು ಪ್ರಬುದ್ಧಗೊಳಿಸಿದೆ. ಕನ್ನಡದ ಮೇರುನಟ, ನಟ ಸಾರ್ವಭೌಮ, ಡಾ. ರಾಜ್‍ಕುಮಾರ್ ರಂಗಭೂಮಿ ಮತ್ತು ಚಲನಚಿತ್ರಗಳ ಮೂಲಕ ದೈತ್ಯ ಪ್ರತಿಭೆಯಾಗಿ ಬೆಳೆದು, ಕನ್ನಡ ಕಟ್ಟಿದ ಕಥೆ ನಮ್ಮ ಕಣ್ಣೆದುರೇ ಇದೆ.

ಇದರಿಂದ ರಂಗಭೂಮಿ ಮತ್ತು ಯಕ್ಷಗಾನವನ್ನು ಶಿಕ್ಷಣದ ಭಾಗವಾಗಿಸಲು ಸಾಧ್ಯವೇ? ಎಂಬುದನ್ನು ಯೋಚಿಸಬೇಕಾಗಿದೆ. ಒಂದು ಪ್ರದೇಶದ ಕಲೆಯನ್ನು ಪಠ್ಯದ ಭಾಗವಾಗಿಸಿ ಪಠ್ಯವಿಕೇಂದ್ರೀಕರಣಗೊಳಿಸಿದರೆ ಅದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ. ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ಪ್ರತೀ ವರ್ಷ ನೂರಾರು ಶಾಲೆಗಳಲ್ಲಿ ನುರಿತ ಕಲಾವಿದರಿಂದ ತರಬೇತಿಯನ್ನು ನೀಡಿ, ನೂರಾರು ಮಕ್ಕಳ ಯಕ್ಷಗಾನವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪ್ರದರ್ಶಿಸಲಾಗುತ್ತದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಯಕ್ಷಗಾನದ ಮೂಲಕ ಬೆಳೆದಿದ್ದಾರೆ. ಆಂಗ್ಲ ಮಾಧ್ಯಮದವರು ಕನ್ನಡವನ್ನು ಚೆನ್ನಾಗಿ ಕಲಿತಿದ್ದಾರೆ. ಪುರಾಣ ಕಥೆಗಳ ಜೊತೆಗೆ ವೈಚಾರಿಕ ಚಿಂತನೆಯ ಹುಟ್ಟಿಗೂ ಇದು ಕಾರಣವಾಗಿದೆ. ಉಡುಪಿಯ ಯಕ್ಷಗಾನ ಕಲಾರಂಗ ನಡೆಸಿದ ‘ಯಕ್ಷ ಶಿಬಿರ’, ಉಡುಪಿಯ ಪ್ರಸಿದ್ಧ ರಂಗಭೂಮಿ, ರಥಬೀದಿಗೆಳೆಯರು ನಡೆಸಿದ ‘ರಂಗ ಶಿಬಿರ’ಗಳು ನನ್ನಂಥ ನೂರಾರು ವಿದ್ಯಾರ್ಥಿಗಳಿಗೆ ರಂಗದ ಮೂಲಕ ಚಿಂತನೆಯ ಶಿಕ್ಷಣವನ್ನು ನೀಡಿದೆ. ಇಂಥ ನೂರಾರು ಉದಾಹರಣೆಗಳನ್ನು ಕರ್ನಾಟಕದಾದ್ಯಂತ ಕಾಣಬಹುದು. ರಂಗಶಿಕ್ಷಣವು ಪಠ್ಯದಲ್ಲಿ ಕಲಿತದಕ್ಕಿಂತ ಹೆಚ್ಚಿನದನ್ನು, ಮಹತ್ವವಾದುದನ್ನು ಕಲಿಸಿದೆ. ಇದು ಕಲಿಕೆಗೆ ಎಂದೂ ಅಡ್ಡಿಯಾಗಿಲ್ಲ. ನಮ್ಮ ಕಣ್ಣುದುರೆ ಕಳೆದ ಹಲವಾರು ವರ್ಷಗಳಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕಲೆ-ರಂಗಭೂಮಿಯ ಮೂಲಕ ಸಂಸ್ಕೃತಿಯ ಶಿಕ್ಷಣವನ್ನು ಪಡೆದಿದ್ದಾರೆ. ಇದು ವ್ಯಾಪಕವಾಗಿ ನಡೆಯಬೇಕಾಗಿದೆ. ಅಲ್ಲದೆ ಇಂದಿನ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲಿಗೆ ಇದೊಂದು ಒಳ್ಳೆಯ ಉತ್ತರವಾಗಬಹುದು. ಇದರೊಂದಿಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಕನ್ನಡ-ಭಾಷೆ ಮತ್ತು ಸಾಹಿತ್ಯ ಅಧ್ಯಯನ ಶಿಬಿರಗಳನ್ನು ಕಡ್ಡಾಯವಾಗಿ ನಡೆಯುವಂತಾಗಬೇಕು. ಕನ್ನಡ-ಸಂಸ್ಕೃತಿ ಇಲಾಖೆಯು ಈ ನಿಟ್ಟಿನಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಬೇಕು.
ನೇತ್ರಾವತಿ ತಿರುವು-ಎತ್ತಿನ ಹೊಳೆ ಬೇಡ

‘ಕನ್ನಡ ನಾಡು-ನುಡಿ’ ಎಂಬ ಮಾತಿದೆ. ನುಡಿಯಷ್ಟೇ ನಾಡು ಕೂಡ ಮುಖ್ಯವಾದುದು. ನಾಡೆಂದರೆ ಅದು ನಿರ್ಜೀವ ಭೂಮಿಯಲ್ಲ ಅಥವಾ ನಮ್ಮೆದುರಿರುವ ಬೃಹತ್ ಪಟ್ಟಣಗಳೂ ಅಲ್ಲ. ನಾಡೆಂದರೆ ನಮ್ಮ ಭೂಮಿ. ಭೂಮಿಯಲ್ಲಿನ ಪ್ರಕೃತಿ ಸಂಪತ್ತು. ಇದರಿಂದ ನಮ್ಮ ಹಿರಿಯರಿಗೆ ನಾಡು-ಭೂಮಿ ನಮ್ಮಂತೆ ಸಜೀವವಾಗಿತ್ತು ಇದರಿಂದಲೇ

ಆಧುನಿಕತೆ ನಮ್ಮ ನಾಡಿನ ಪ್ರಕೃತಿ ಸಂಪತ್ತನ್ನು ಕಬಳಿಸುತ್ತಿದೆ. ಯಾರದೋ ಸ್ವಾರ್ಥಕ್ಕೆ ಯಾವುದೋ ಯೋಜನೆ ನಮ್ಮ ಭೂಮಿ, ಅರಣ್ಯ, ನದಿಗಳು ನಾಶವಾಗುತ್ತಿದೆ. ಪರಿಸರದ ಬಗ್ಗೆ ಕೆಲಸ ಮಾಡುವ ಒಬ್ಬರಲ್ಲಿ ಕೇಳಿದೆ- “ನಮ್ಮಲ್ಲಿ ವ್ಯರ್ಥವಾಗುವ ನೀರನ್ನು ಬಯಲುಸೀಮೆಗೆ ಹರಿಸಿದರೆ ಏನು ನಷ್ಟ?”. ಅವರು ಸರಳವಾಗಿ ಹೇಳಿದ ಉತ್ತರ ಬೆಚ್ಚಿ ಬೀಳಿಸುವಂತಿತ್ತು. ಇಲ್ಲಿ ಬೀಳುವ ಮಳೆನೀರು ಇಲ್ಲಿಯ ನೆಲ, ನದಿ ಸಮುದ್ರದ ಸ್ವತ್ತು. ಇದು ನಮ್ಮಲ್ಲಿ ಅಂತರ್ಜಲಕ್ಕೆ ಕಾರಣವಾಗಿದೆ. ಸಮುದ್ರ ಸೇರುವ ನೀರಿನಿಂದ ಮಳೆ ಬರುತ್ತದೆ. ಹೀಗೆ ಇಂಗುವ-ಹರಿಯುವ ನೀರನ್ನು ಕೃತಕವಾಗಿ ಇನ್ನೊಂದೆಡೆ ಹರಿಸಿದರೆ ನಾಡು ಬರಡಾಗುತ್ತದೆ. ಪ್ರಕೃತಿ ನಾಶವಾಗುತ್ತದೆ. ಇದರಿಂದ ನದಿ ತಿರುಗಿಸುವ ಯೋಜನೆ ಮೇಲೆ ಯೋಚಿಸಿದಷ್ಟು ಸರಳವಾಗಿಲ್ಲ. ಇದರಿಂದ ಈ ಯೋಜನೆಯನ್ನು ಕೈಬಿಡುವಂತೆ ಸರಕಾರವನ್ನು ನಾವು ವಿದ್ಯಾರ್ಥಿಗಳೂ ಒತ್ತಾಯಿಸುತ್ತಿದ್ದೇವೆ. ಬಯಲು ಸೀಮೆಯ ಜನರಿಗೂ ನೀರು ಸಿಗಬೇಕು. ಇಂದು ವಿಜ್ಞಾನ,ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಅದನ್ನು ಬಳಸಿಕೊಂಡು ಪಕೃತಿ ಸಹ್ಯ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲವೇ? ನಮ್ಮ ನೆಲ-ಜಲ-ಪ್ರಕೃತಿಯನ್ನು ನಮಗೆ ಬಿಟ್ಟು ಬಿಡಿ. ನಮ್ಮ ನಾಡನ್ನು ಅಂದರೆ ನೆಲವನ್ನು ನಾಶ ಮಾಡುವ ಯಾವ ಯೋಜನೆಯೂ ನಮಗೆ ಬೇಡ. ಕರಾವಳಿಯ ಪ್ರಕೃತಿ ರಕ್ಷಣೆಯ ಬದ್ಧತೆಯನ್ನು ನಾವೆಲ್ಲ ತೋರ್ಪಡಿಸಬೇಕಾಗಿದೆ.

ಮಕ್ಕಳು ಸಹಿಷ್ಣುತೆ ಕಲಿಯುವ ವಾತಾವರಣವಿರಲಿ

ಪತ್ರಿಕೆಯನ್ನು ತೆರೆದರೆ ಎಲ್ಲಾ ಪುಟಗಳಲ್ಲಿ ‘ಅಸಹಿಷ್ಣುತೆ’ಗಳ ಸುದ್ದಿಯೇ ಕಂಡುಬರುತ್ತಿದೆ. ನಮ್ಮದು ಬಹು ಸಂಸ್ಕೃತಿಯ ನಾಡು. ಹಲವು ಭಾಷೆ, ಧರ್ಮ, ಜಾತಿ ಪಂಗಡಗಳು ನಮ್ಮಲ್ಲಿವೆ. ‘ಸಹಿಷ್ಣುತೆ’ ಈ ನಾಡಿನ ಬಹುಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಂಡು ಬಂದಿದೆ. ನಮ್ಮ ಪವಿತ್ರ ಗ್ರಂಥ, ಸಂವಿಧಾನವು ಇದನ್ನು ಬಲವಾಗಿ ಪ್ರತಿಪಾದಿಸುತ್ತದೆ. ಎಲ್ಲಾ ಧರ್ಮ, ಜಾತಿ, ಭಾಷೆಯ ಜನರು ಪರಸ್ಪರ ಗೌರವದಿಂದ ಬದುಕುವುದೇ ಸಹಿಷ್ಣುತೆ. ಆದಿ ಕವಿ ಪಂಪನ ‘ಮಾನವಕುಲಂ ತಾನೊಂದು ವಲಂ’ ಎಂಬ ಮಾನವೀಯ ಸಂದೇಶವು ಕನ್ನಡ ನಾಡಿನ ಸಹಿಷ್ಣುತಾ ಗುಣಕ್ಕೆ ಸಾಕ್ಷಿಯಾಗಿದೆ. ಬಸವಣ್ಣನು-
ಇವನಾರವ ಇವನಾರವ ಇವನಾರನೆಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವ
ನಿಮ್ಮ ಮನೆಯ ಮಗನೆಂದೆನಿಸಯ್ಯ
ಎಂದು ‘ಸಹಿಷ್ಣುತೆ’ ಸಂದೇಶವನ್ನು ಸಾರಿದ್ದಾನೆ. ಕುವೆಂಪು ನಮ್ಮ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದಿದ್ದಾರೆ. ಹೀಗೆ ಸಾವಿರಾರು ವರ್ಷಗಳಿಂದ ಈ ನಾಡಿನ ಕವಿಗಳು, ದಾರ್ಶನಿಕರು, ಸಂತರು ಇಲ್ಲಿನ ಬಹು ಸಂಸ್ಕೃತಿಯನ್ನು ಗೌರವಿಸಿ, ಸಹಿಷ್ಣುತೆಯ ಪಾಠ ಹೇಳಿದ್ದಾರೆ. ನಾಡು-ನುಡಿಯನ್ನು ಪ್ರೀತಿಸುವ ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಧರ್ಮ-ಜಾತಿಯ ಹಿಂಸೆ ನಾಡಿನ ಅಭಿವೃದ್ಧಿ ಅಧಃಪತನಕ್ಕೆ ಕಾರಣವಾಗುತ್ತದೆ. ಕವಿಗಳು, ಸಂತರು, ದಾರ್ಶನಿಕರು ಹಾಗೂ ಹಿರಿಯರು ಬೋಧಿಸಿದ ‘ಸಹಿಷ್ಣುತೆ’ಯನ್ನು ಕಲಿಯುವ, ಅಳವಡಿಸುವ, ವ್ಯವಹರಿಸುವ ವಾತಾವರಣ ಇರಬೇಕಾಗಿದೆ. ಆಗ ಮಾತ್ರ ಮಕ್ಕಳು ಸಹಿಷ್ಣುತೆಯ ವಾತಾವರಣದಲ್ಲಿ ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯ. ಹಿಂಸೆಯ ವಾತಾವರಣ ಹಿಂಸಕರನ್ನು ಸೃಷ್ಟಿಸಬಹುದು. ಮುಂದಿನ ಜನಾಂಗವಾದ ಇಂದಿನ ಮಕ್ಕಳಿಗೆ ಸಹಿಷ್ಣುತೆಯ ಉತ್ತಮ ಮಾದರಿಯನ್ನು ನೀಡೋಣ.
ಕನಸು ಕಾಣೋಣ
ಕನಸುಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.
ಎಲ್ಲರೂ ಕನಸು ಕಾಣಬೇಕು. ಆದರೆ ಆ ಕನಸು ಅವರದ್ದಾಗಿರಬೇಕು.

ಬಹುತೇಕ ವಿದ್ಯಾರ್ಥಿಗಳು ಕನಸು ಕಾಣುವುದಿಲ್ಲ. ಕನಸು ನನಸಾಗುವುದಿಲ್ಲವೋ ಎಂಬ ಭಯ ಕೆಲವರದ್ದಾದರೆ; ಇನ್ನು ಕೆಲವರು ಕನಸಿನ ನಿಜವಾದ ಅರ್ಥವನ್ನು ಅರಿತಿರುವುದಿಲ್ಲ. ಯಾರೋ ಅಥವಾ ಸಮಾಜ ಕಟ್ಟಿಕೊಟ್ಟ ಕೆಲವು ಜೀವನದ ಸಾಧ್ಯತೆಗಳನ್ನು ತಮ್ಮ ಕನಸೆಂದು ನಂಬಿರುತ್ತಾರೆ. ಈ ರೀತಿಯ ಮನೋಧರ್ಮ ಹೊಸತನಕ್ಕೆ ಅಥವಾ ಕ್ರಿಯಾಶೀಲ ಬೆಳವಣಿಗೆಗೆ ಅಡ್ಡಿಯನ್ನು ಉಂಟುಮಾಡುತ್ತದೆ.

ನೇಮಿಚಂದ್ರರು ಹೇಳುವಂತೆ “ನಮ್ಮ ಕನಸುಗಳಿಗೆ ಎಂತಹ ಅದ್ಭುತ ಶಕ್ತಿಯಿದೆ. ಕನಸು ಕಾಣಬೇಕಷ್ಟೇ, ಆರಂಭವಷ್ಟೇ ಕಷ್ಟ, ಮೊದಲ ಹೆಜ್ಜೆ ಇಟ್ಟಂತೆ ಹಾದಿ ಸುಗಮ” ಕನಸುಗಳು ನಮ್ಮ ಚಿಂತನೆಗಳಿಗೆ ರೆಕ್ಕೆಗಳನ್ನು ಕೊಡುತ್ತವೆ. ಚಿಂತನೆಗಳಿಗೆ ರೆಕ್ಕೆಗಳು ದೊರೆತಾಗ ಅವು ಇಡೀ ಜಗತ್ತನ್ನೇ ಸುತ್ತಬಲ್ಲ ಶಕ್ತಿಯನ್ನು ಪಡೆಯುತ್ತವೆ”. ಮನುಷ್ಯನ ದೈಹಿಕ ಶಕ್ತಿಗಿಂತ ಚಿಂತನೆಗಳ ಶಕ್ತಿಯೇ ಹಿರಿದಾದುದು. ಏಕೆಂದರೆ ಆತ ದೈಹಿಕವಾಗಿ ಮಾಡಲಾರದ್ದನ್ನು ಚಿಂತನೆಗಳ ಮೂಲಕ ತನ್ನ ಕನಸಿನ ಲೋಕದಲ್ಲಿ ಮಾಡಬಹುದು ಮತ್ತು ಅಂತಹ ಚಿಂತನೆಗಳು ಆತನನ್ನು ಕ್ರಿಯಾಶೀಲನನ್ನಾಗಿಸಿ, ಆತನ ಮೂಲಕ ಜಗತ್ತಿನಲ್ಲಿ ಅದ್ಭುತಗಳಿಗೆ ನಾಂದಿ ಹಾಡುತ್ತದೆ.

ಮನುಷ್ಯನ ಜೀವನದಲ್ಲಿ ಯಾವುದೂ ಶಾಶ್ವತವಾಗಿರುವುದಿಲ್ಲ. ಆದರೆ ಆತನ ಜ್ಞಾನ ಮತ್ತು ಕನಸುಗಳನ್ನು ಯಾರಿಂದಲೂ ಕಸಿದುಕೊಳ್ಳಲಾಗುವುದಿಲ್ಲ. ಕನಸುಗಳು ಮನುಷ್ಯನ ಜೀವನದಲ್ಲಿ, ಮರುಭೂಮಿಯಲ್ಲಿ ಸಿಕ್ಕ ನೀರಿನಂತೆ, ಸುಖ-ದುಃಖಗಳ ನಡುವ ಆತನನ್ನು ಆಶಾವಾದಿಯನ್ನಾಗಿಸುವ ಹಾಗೂ ಸ್ಥಿತಪ್ರಜ್ಞನನ್ನಾಗಿಸುವ ಆಸರೆಯಂತೆ, ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯುವ ದೀಪದಂತಿರುತ್ತದೆ. ಬಿಳಿ ಹಾಳೆಯಾಗಿರುವ ಈ ಬದುಕಿಗೆ ಮೆರಗನ್ನು ನೀಡುವ ಬಣ್ಣಗಳೇ ನಮ್ಮೀ ಕನಸುಗಳು. ಅವುಗಳು ಬಾಳಿನ ಸೌಂದರ್ಯವನ್ನು ಹೆಚ್ಚಿಸಿ, ಬಾಳನ್ನು ವರ್ಣಮಯವಾಗಿಸುತ್ತದೆ.

ಏನನ್ನೂ ಬಯಸದೆ, ಎಲ್ಲವನ್ನೂ ನೀಡುವುದೆಂದರೆ ಅದು ಕನಸುಗಳು ಮಾತ್ರ. ಕನಸನ್ನು ಪಡೆಯುವ ಇಚ್ಛೆಯ ತೀವ್ರತೆ ಪರಿಶ್ರಮದಲ್ಲಿ ಪರಿಣಮಿಸುತ್ತದೆ. ನನಸಾದ ಕನಸು ಮನುಷ್ಯನಿಗೆ ಸಾರ್ಥಕ್ಯದ ಅನುಭವವನ್ನು ನೀಡುತ್ತದೆ. ಅದರಲ್ಲೂ ಆ ಕನಸು ತಮ್ಮದಾಗಿದ್ದಾಗ ನಿಜವಾದ ಗೆಲುವಿನ ಅನುಭವವಾಗುತ್ತದೆ. ಆದ್ದರಿಂದ ಎಲ್ಲರೂ ಕನಸು ಕಾಣಬೇಕು. ಅದರಲ್ಲೂ ಆ ಕನಸು ಅವರದ್ದಾಗಿರಬೇಕು. ಏಕೆಂದರೆ ಪ್ರತಿಯೊಬ್ಬರಿಗೂ ಕನಸು ಕಾಣುವ ಹಕ್ಕಿದೆ.

ನಮ್ಮ ಬದುಕನ್ನು ಸಾಂಸ್ಕೃತಿಕವಾಗಿ ರೂಪಿಸುವ ಕನಸು ಕಾಣೋಣ. ನಾವೂ ಬೆಳೆದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ಕನಸು ಕಾಣೋಣ. ಬುದ್ಧ ಮತ್ತು ಗಾಂಧಿಯ ನಾಡಾದ ನಮ್ಮ ನಾಡನ್ನು ಸರ್ವಜನಾಂಗದ ತೋಟ ಮಾಡುವ ಕನಸು ಕಾಣೋಣ. ನಮ್ಮ ನಾಡಿನ ಪ್ರಕೃತಿ ಸಂಪತ್ತನ್ನು ಉಳಿಸುವ, ಬೆಳೆಸುವ ಕನಸು ಕಾಣೋಣ. ಈ ಸಮ್ಮೇಳನವು ನಮ್ಮ ಮಕ್ಕಳು, ವಿದ್ಯಾರ್ಥಿಗಳಲ್ಲಿ, ಯುವಜನತೆಯಲ್ಲಿ ಈ ಕನಸನ್ನು ಬಿತ್ತಲಿ ಎಂಬ ಆಶಯದೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಲ್ಲರಿಗೂ ವಂದಿಸುತ್ತಿದ್ದೇನೆ.

Exit mobile version