ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಡ್ಡರ್ಸೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರಸಕ್ತ ಶೈಕ್ಷಣಿಕ ವರ್ಷದ ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೆಸರಲ್ಲೊಂದಿನ ಎನ್ನುವ ವಿಶೇಷ ಕಾರ್ಯಕ್ರಮ ಬನ್ನಾಡಿ ಕಂಬಳಗದ್ದೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ಬಿ.ಎಂ. ಸುಕುಮಾರ ಶೆಟ್ಟಿ ಅವರು ಮಾತನಾಡಿ, ವಡ್ಡರ್ಸೆ ನಾಡಿಗೆ ಅನೇಕ ಗಣ್ಯರನ್ನು ಕೊಟ್ಟ ಗ್ರಾಮ. ಐತಿಹಾಸಿಕ ಮಹತ್ವ ಹೊಂದಿದ ಬನ್ನಾಡಿ ಕಂಬಳ ಗದ್ದೆಯಲ್ಲಿ ನಮ್ಮ ಸಂಸ್ಥೆಯ ಎನ್.ಎಸ್.ಎಸ್. ಸ್ವಯಂಸೇವಕರು ವೈವಿಧ್ಯಮಯ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿಯ ಸಂಗತಿ. ಗ್ರಾಮದ ಚರಿತ್ರೆಯನ್ನು ಅವಲೋಕಿಸುವುದರ ಜೊತೆಗೆ, ವಿದ್ಯಾರ್ಥಿಗಳು ಊರವರ ಪ್ರೀತಿಗೆ ಪಾತ್ರರಾಗಿರುವುದು ಉಲ್ಲೇಖನೀಯ ಎಂದರು.
ಕಂಬಳಗದ್ದೆಯಲ್ಲಿ ನಡೆಯುವ ವಿವಿಧ ಕ್ರೀಡೆಗಳಿಗೆ ಕಂಬಳದ ಕೋಣಗಳಿಗೆ ಆರತಿ ಎತ್ತುವ ಮೂಲಕ ಗೋವಾದ ಓಎನ್‌ಜಿಸಿಯ ನಿವೃತ್ತ ಚೀಫ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಚಾಲನೆ ನೀಡಿದರು.
ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಕೆಸರುಗದ್ದೆ ಓಟ, ಬೆನ್ನು ಮೂಟೆ, ಹಾಳೆಬಂಡಿ, ಪಿರಮಿಡ್, ಎತ್ತಿನ ಬಂಡಿ ಓಟ ಇತ್ಯಾದಿ ವೈವಿಧ್ಯಮಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಯಿತು. ಸ್ಥಳೀಯ ನೂರಾರು ಜನರು ಗ್ರಾಮೀಣ ಕ್ರೀಡೆಗಳನ್ನು ಕಣ್ತುಂಬಿ ಕೊಂಡರು.
ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬನ್ನಾಡಿ ಇದರ ಅಧ್ಯಕ್ಷರಾದ ಬಿ. ವಿಶ್ವನಾಥ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬ್ರಹ್ಮ ಬೈದರ್ಕಳ ಕಂಬಳ ಸಮಿತಿ ಬನ್ನಾಡಿ ಇದರ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಬನ್ನಾಡಿ ಶುಭಶಂಸನೆಗೈದರು. ಕಂಬಳ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಬನ್ನಾಡಿ ಆಶಯ ನುಡಿಗಳನ್ನಾಡಿದರು. ಜೊತೆ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಬನ್ನಾಡಿ ಶುಭ ಹಾರೈಸಿದರು.
ಈ ಸಂದರ್ಭ ಕಾಲೇಜು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉದ್ಯಮಿ ಜಯಕರ ಹೆಗ್ಡೆ, ಕಾಲೇಜು ಗವನಿಂಗ್ ಕೌನ್ಸಿಲ್ ಸದಸ್ಯ ನಾರಾಯಣ ನಾಯಕ್ ನೇರಳೆಕಟ್ಟೆ, ಎಸ್.ಡಿ.ಸಿ.ಸಿ. ಬ್ಯಾಂಕ್ ಬಾರ್ಕೂರು ಶಾಖೆಯ ಶಾಖಾ ಪ್ರಬಂಧಕ ಜೀವನ್ ಹೆಗ್ಡೆ ಉಪ್ಲಾಡಿ, ರಥಬೀದಿ ಫ್ರೆಂಡ್ಸ್ ವಡ್ದರ್ಸೆ ಇದರ ಅಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ತೀರ್ಥನ್, ಭಾಸ್ಕರ್ ಪೂಜಾರಿ ಬನ್ನಾಡಿ, ಉದಯ ಪೂಜಾರಿ ಬನ್ನಾಡಿ, ರತ್ನಾಕರ ಶೆಟ್ಟಿ ಬನ್ನಾಡಿ, ಕೊತ್ತಾಡಿ ವಿಜಯ್ ಕುಮಾರ್ ಶೆಟ್ಟಿ, ಆಶಿತ್ ಕುಮಾರ್ ಶೆಟ್ಟಿ ಬನ್ನಾಡಿ, ಗ್ರಾಮ ಆಡಳಿತ ಅಧಿಕಾರಿ ಶರತ್ ಕುಮಾರ್ ಶೆಟ್ಟಿ ಬನ್ನಾಡಿ, ಶಿಬಿರಾಧಿಕಾರಿ ದೀಪಾ ಪೂಜಾರಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಕೆ. ಉಮೇಶ್ ಶೆಟ್ಟಿ ಪ್ರಸ್ತಾವಿಸಿದರು, ಉಪ-ಪ್ರಾಂಶುಪಾಲ ಹಾಗೂ ಶಿಬಿರಾಧಿಕಾರಿ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು, ಶಿಕ್ಷಕ ವಡ್ಡರ್ಸೆ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

