ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನವು ಫೆಬ್ರವರಿ 21, 22 ಮತ್ತು 23ರಂದು ಭಂರ್ಡಾಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಹೇಳಿದರು.
ಅವರು ಬುಧವಾರ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಭಂಡಾರ್ಕಾರ್ಸ್ ಆರ್ಟ್ಸ್ & ಸಾಯನ್ಸ್ ಕಾಲೇಜು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬೆಂಗಳೂರು ಹಾಗೂ ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘ ಇವರ ಸಹಯೋಗದೊಂದಿಗೆ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನ 3 ದಿನಗಳ ಕಾಲ ನಡೆಯಲಿದೆ ಎಂದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಕರ್ನಾಟಕ ಇತಿಹಾಸ ಪರಿಷತ್ ಸ್ಥಳೀಯ ಕಾರ್ಯದರ್ಶಿ ಕೆ. ಗೋಪಾಲ ಮಾತನಾಡಿ, ಫೆ.21ರ ಪೂರ್ವಾಹ್ನ 10 ಗಂಟೆಗೆ ಮಹಾಅಧೀವೇಶನದ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯನ್ನು ಮಾಹೆ ಪ್ರೊ- ಛಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಅವರು ನೆರವೆರಿಸಲಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಂಗಳೂರು ಹಾಗೂ ದೆಹಲಿ ವಿಶ್ವವಿದ್ಯಾನಿಲಯ ಇತಿಹಾಸ ವಿಭಾಗದ ಮಾನ್ಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೇಶವನ್ ವೇಳುತಾಟ್ ಅವರು ವಹಿಸಲಿದ್ದಾರೆ. ಮುಖ್ಯ ಉಪಸ್ಥಿತರಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೆಂಗಳೂರು ಕರ್ನಾಟಕ ಇತಿಹಾಸ ಪರಿಷತ್ತು ಅಧ್ಯಕ್ಷರಾದ ಡಾ. ರಾಜಣ್ಣ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮಾನ್ಯ ಕುಲಪತಿಗಳಾದ ಡಾ. ಡಿ. ವಿ. ಪರಮಶಿವಮೂರ್ತಿ, ಬೆಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಡಾ. ಎಮ್.ಎಸ್. ಜಯಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾಂಸರುಗಳಿಗೆ ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆ ಪ್ರಶಸ್ತಿ, ಡಾ. ಬಿ. ಶೇಕ್ ಅಲಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಒನಕೆ ಓಬವ್ವ ಪ್ರಶಸ್ತಿ, ಕುಂದಣ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ದಿನಾಂಕ 21 ಮತ್ತು 22 ರಂದು ಪ್ರೊ. ಎಸ್. ಶೆಟ್ಟರ್ ದತ್ತಿನಿಧಿ, ಪ್ರೊ. ಎಲ್. ಪಿ ರಾಜು ದತ್ತಿನಿಧಿ ಈರಣ್ಣ ಪತ್ತಾರ ದತ್ತಿನಿಧಿ, ಪ್ರೊ ಎಸ್. ರಾಜಶೇಖರ ದತ್ತಿನಿಧಿ, ಪ್ರೊ ಶಿವರುದ್ರ ಕಲ್ಲೋಳಿಕರ್ ದತ್ತಿನಿದಿ, ಪ್ರೊ ನಾಗರತ್ನ ದತ್ತಿನಿಧಿ ಉಪನ್ಯಾಸಗಳು ನಡೆಯಲಿರುವುದು. ದಿನಾಂಕ 21.02.2023ರ ಸಂಜೆ 5.00ಕ್ಕೆ ಕವಿ – ಅಮೃತ ಸೋಮೇಶ್ವರ ವಿರಚಿತ ಶ್ರೀ ಪ್ರಸಾದ್ ಕುಮಾರ ಮೊಗೆಬೆಟ್ಟು ನಿರ್ದೇಶನದಲ್ಲಿ “ರಣಧೀರ ಪುಲಿಕೇಶಿ”ಎಂಬ ಯಕ್ಷಗಾನ ಪ್ರಸಂಗ ನಡೆಯಲಿರುವುದು. ದಿನಾಂಕ 23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ ಕುರಿತ ಸಿಂಪೋಸಿಯಂ ಮತ್ತು ಸಮಾರೋಪ ಸಮಾರಂಭ ನಡೆಯಲಿರುವುದು ಎಂದರು.
ಕರ್ನಾಟಕ ಇತಿಹಾಸ ಪರಿಷತ್‌ನ ಕಾರ್ಯದರ್ಶಿ ಆರ್. ಕೆ. ಪತ್ತರ್ ಧಾರವಾಡ ಮಾತನಾಡಿದರು. ಖಜಾಂಚಿ ಎನ್. ವಿ. ಅಸ್ಕಿ, ಕಾಲೇಜಿನ ವ್ಯವಸ್ಥಾಪಕ ಗೋಪಾಲ ನಾಯ್ಕ್, ಕ್ಷೇಮಪಾಲನಾ ಅಧಿಕಾರಿ ಸತ್ಯನಾರಾಯಣ, ಇಂಗ್ಲೀಷ್ ವಿಭಾಗದ ಉಪನ್ಯಾಸಕ ಶರಣ ಕುಮಾರ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಸುರೇಶ್ ಉಪಸ್ಥಿತರಿದ್ದರು.
ಕರ್ನಾಟಕ ಇತಿಹಾಸ ಪರಿಷತ್ತು ಮಹಾಅಧಿವೇಶನ ಪ್ರತಿವರ್ಷ ರಾಜ್ಯದ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯ ಕುರಿತಂತೆ ಸಂಶೋಧನೆಗಳನ್ನು ಮಾಡಲು ಪ್ರೇರೇಪಿಸುವುದು. ಸಂಶೋಧನೆ, ಪ್ರಬಂಧಮಂಡನೆ, ಪುಸ್ತಕ ಪ್ರಕಟಣೆ ಮುಂತಾದ ಜ್ಞಾನವೃದ್ಧಿ ಪ್ರಕ್ರಿಯೆಯನ್ನು ಉತ್ತೇಜಿಸುವುದು. ಕರ್ನಾಟಕ ವಿವಿಧ ಭಾಗದ ಸಂಶೋಧಕರಿಗೆ, ವಿದ್ವಾಂಸರುಗಳಿಗೆ ಹೊಸ ಹೊಸ ವ್ಯಾಖ್ಯಾನ ವಿವರಣೆಯುಳ್ಳ ಕೃತಿಗಳನ್ನು ಪ್ರಕಟಿಸಲು ವೇದಿಕೆಯನ್ನು ಒದಗಿಸುವುದು. ಕರ್ನಾಟಕದ ಇತಿಹಾಸದ ವೈಶಿಷ್ಟತೆಯನ್ನು ಬೌದ್ಧಿಕ ವಲಯಕ್ಕೆ ತಲುಪಿಸುವುದು.

