ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸನಾತನ ಹಿಂದು ಧರ್ಮಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಭದ್ರ ಬುನಾದಿ ಮೇಲೆ ನಿಂತಿದೆ. ಸನಾತನ ಧರ್ಮ ಒಂದು ಉತ್ತಮ ಜೀವನ ಪದ್ಧತಿ. ಈ ದೇಶದ ಸಂಸ್ಕಾರಯುತ ನಾಗರಿಕರು ಸಮಾಜಕ್ಕೆ ಹಾಗೂ ದೇಶಕ್ಕೆ ಉಪಯುಕ್ತವಾಗಬಲ್ಲರು ಮತ್ತು ದೇಶ ಮತ್ತು ಧರ್ಮವನ್ನು ರಕ್ಷಿಸಬಲ್ಲರು ಎಂದು ಸುರತ್ಕಲ್‌ನ ಶ್ರೀನಿವಾಸ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ವಿನಾಯಕ ಶೆಣೈ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾ ಭವನದಲ್ಲಿ ಜರಗಿದ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇದರ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೌದ್ಧಿಕ್ ನೀಡಿ ಮಾತನಾಡಿದರು.
ಪರಕೀಯರ ದಾಳಿಗೆ ಸಿಲುಕಿದ ಪರಿಣಾಮ ನಮ್ಮ ಸಂಸ್ಕೃತಿ ಮೇಲೆ ಅತ್ಯಾಚಾರ, ಅವಹೇಳನ ಪಾಶ್ಚಿಮಾತ್ಯರಿಂದ ನಡೆಯಿತು. ಪಾಶ್ಚಿಮಾತ್ಯ ಶಿಕ್ಷಣವನ್ನು ವೈಭವೀಕರಿಸಲಾಯಿತು. ಹಿಂದು ಧರ್ಮದ ಮೇಲೆ, ಹಿಂದು ಶೈಕ್ಷಣಿಕ ಕ್ರಮದ ಮೇಲೆ ಬಹಳ ದಾಳಿ ನಡೆದಿದ್ದರೂ, ಇಂದಿಗೂ ಸನಾತನ ಹಿಂದು ಧರ್ಮ ಇತರ ರಾಷ್ಟ್ರಗಳಿಗೆ ಮಾದರಿಯಾಗಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಮೌಲ್ಯಾಧಾರಿತ ಶಿಕ್ಷಣ ಶಿಶು ಮಂದಿರದಲ್ಲಿ ದೊರೆಯುತ್ತದೆ. ಶಿಶು ಮಂದಿರಕ್ಕೆ ಬಂದಂತಹ ಮಕ್ಕಳು ದೇಶದ ಮುಂದಿನ ಶಕ್ತಿವಂತ ಪ್ರಜೆಗಳಾಗಲಿದ್ದಾರೆ. ಶಿಶು ಮಂದಿರದ ಶಿಕ್ಷಣದಿಂದ ಉತ್ತಮ ದೇಶಭಕ್ತ, ರಾಷ್ಟ್ರಭಕ್ತ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.
ಪರ್ಸಿನ್ ಮೀನುಗಾರರ ಸೇವಾ ಸಹಕಾರಿ ಸಂಘ ಕೋಟ ಇದರ ನಿರ್ದೇಶಕ ರಾಘವೇಂದ್ರ ವಿ. ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಸಂಗೀತಾ ಆರ್. ಮೇಸ್ತ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಶಿಶು ಮಂದಿರದ ಅಧ್ಯಕ್ಷ ಬಿ. ರಾಘವೇಂದ್ರ ಪೈ ಸ್ವಾಗತಿಸಿದರು. ಸಂಚಾಲಕ ಡಾ. ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಾಯತ್ರಿ ಕೊಡಂಚ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಶು ಮಂದಿರದ ಸದಸ್ಯರಾದ ವಿಜಯಶ್ರೀ ವಿ. ಆಚಾರ್ಯ, ವಸಂತಿ ಖಾರ್ವಿ, ಮಾತಾಜಿ ರತ್ನ ಅತಿಥಿಗಳನ್ನು ಗೌರವಿಸಿದರು. ಮಾಜಿ ಅಧ್ಯಕ್ಷರಾದ ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಸವಿತಾ ಯು.ದೇವಾಡಿಗ ವಂದಿಸಿದರು.

