ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿಯನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.
ವಿದ್ಯಾರ್ಥಿ ವೃಂದದವರು ಭಕ್ತಿಗೀತಾ ಗಾಯನ, ಉಪವಾಸ, ಶಿವಸ್ತೋತ್ರ ಪಠಣದ ಮುಖೇನ ಆದಿಯೋಗಿಯನ್ನು ಆರಾಧಿಸಿ, ಕೃತಾರ್ಥತೆ ಹೊಂದಿದರು.
ಸಂಜೆಯ ಭಜನಾ ಕಾರ್ಯಕ್ರಮದ ಅವಧಿಯಲ್ಲಿ ಶಿವಾರಾಧನೆಯ ಕ್ರಮವನ್ನು ಬಣ್ಣಿಸುತ್ತಾ ಶಿವಪೂಜೆ ಮತ್ತು ಶಿವಭಜನೆ ಕೇವಲ ಒಂದು ದಿನದ್ದಲ್ಲ, ನಮ್ಮ ಜೀವನವೇ ಒಂದು ಶಿವಪೂಜೆಯಾಗಬೇಕು. ಶಂಕರನೆಂದರೆ ಉತ್ತಮವಾದದ್ದನ್ನು ಮಾಡುವವನೆಂದರ್ಥ. ಸಮಾಜದ, ದೇಶದ ಹಿತವನ್ನು ಕಾಪಾಡುವ ಕಾರ್ಯಗಳ ಮೂಲಕ ಸದಾ ಶಂಕರನನ್ನು ಆರಾಧಿಸಬೇಕು ಮತ್ತು ಅನುಸರಿಸಬೇಕು. ಅಂತಸಾಕ್ಷಿ ಸ್ವರೂಪದಲ್ಲಿದ್ದು ನಮ್ಮನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವವ ಶಿವನಾಗಿದ್ದಾನೆ. ಭಗೀರಥನ ಪ್ರಾರ್ಥನೆಗೆ ಓಗೊಟ್ಟು ಧರೆಗೆ ಧುಮುಕಿದ ಗಂಗೆಯನ್ನು ಶಿರದೊಳು ಧರಿಸಿ ಭೂಮಾತೆಗೆ ನಿಧಾನವಾಗಿ ನೀರನ್ನು ಇಳಿಸಿದವನು ಗಂಗಾಧರ. ದೇಶದ ರಕ್ಷಣೆಯನ್ನು ಉತ್ತರ ದಿಕ್ಕಿನಲ್ಲಿ ಸದಾ ನಡೆಸುತ್ತಿರುವವನು ಕೈಲಾಸ ಪರ್ವತವಾಸಿ ಈಶನಾಗಿದ್ದಾನೆ. ಸಮುದ್ರಮಥನದ ಕಾಲದಲ್ಲಿ ಉತ್ಪನ್ನವಾದ ವಿಷವನ್ನು ಕುಡಿದು ಜಗತ್ತನ್ನು ರಕ್ಷಿಸಿದವನು ನೀಲಕಂಠನಾಗಿದ್ದಾನೆ. ಮಾರ್ಕಂಡೇಯನ ರಕ್ಷಣೆಗೆ ನಿಂತು ಯಮನನ್ನೇ ಜಯಿಸಿ ಮೃತ್ಯುಂಜಯನೆನಿಸಿದ್ದಾನೆ ಎನ್ನುತ್ತಾ ಶಿವತತ್ವ ವಿಚಾರಗಳನ್ನು ಸಂಸ್ಥೆಯ ಸಂಸ್ಕೃತ ಅಧ್ಯಾಪಕ ರಾಮಕೃಷ್ಣ ಉಡುಪರು ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ಮಾತನಾಡುತ್ತಾ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದರೊಂದಿಗೆ ಧಾರ್ಮಿಕ ಆಚರಣೆಗಳನ್ನೂ ಕ್ರಮಬದ್ಧವಾಗಿ ನಡೆಸುತ್ತಿರುವುದು ನಮ್ಮ ಶಾಲೆಯ ವೈಶಿಷ್ಟ್ಯಗಳಲ್ಲೊಂದಾಗಿದೆ. ವಿದ್ಯಾರ್ಥಿಗಳಿಗೆ ಧಾರ್ಮಿಕ ಆಚರಣೆಗಳನ್ನು ಆಚರಿಸುವ ಕ್ರಮ ಮತ್ತು ಅದರ ಹಿನ್ನಲೆಗಳ ಬಗ್ಗೆ ಅರಿವನ್ನು ಮೂಡಿಸುವುದು ನಮ್ಮ ಮಹದುದ್ದೇಶವಾಗಿದೆ. ಹಬ್ಬಗಳು ಮತ್ತು ಅವುಗಳ ಆಚರಣೆಗಳ ಬಗ್ಗೆ ತಿಳಿದು, ಜೀವನದಲ್ಲಿ ಕ್ರಮಬದ್ಧವಾಗಿ ಆಚರಿಸುತ್ತಾ, ಭಾರತೀಯ ಪರಂಪರೆಯ ಹಬ್ಬಗಳನ್ನು ಸುಖಸಂತೋಷದಿಂದ ಆಚರಿಸಬೇಕು. ಶಿವಾರಾಧನೆಯಿಂದ ಎಲ್ಲರಿಗೂ ನೆಮ್ಮದಿಯ ಜೀವನ ದೊರೆಯಲಿ. ಎಂದು ಹರಸಿದರು.
ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಶಾಲೆಯ ಉಪ ಪ್ರಾಂಶುಪಾಲ ರಾಮ ದೇವಾಡಿಗ ಹಾಗೂ ಶಾಲಾಶಿಕ್ಷಕ-ಶಿಕ್ಷಕೇತರ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

