ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವರಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅನುಷ್ಠಾನಕ್ಕಾಗಿ ಬೈಂದೂರು ತಾಲೂಕಿನಲ್ಲಿ ಇದುವರೆಗೆ ಸುಮಾರು 158.50 ಕೋಟಿ ರೂ. ವೆಚ್ಚಮಾಡಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಉಪ್ಪುಂದ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮೀ ಯೋಜನೆಯಿಂದ 27,556 ಫಲಾನುಭವಿಗಳ ಖಾತೆಗೆ ರೂ. 80.21 ಕೋಟಿ ಜಮಾ ಆಗಿದೆ. ತಾಂತ್ರಿಕ ಕಾರಣದಿಂದಾಗಿ 479 ಫಲಾನುಭವಿಗಳಿಗೆ ಬಾಕಿಯಿದೆ. ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ಉಪಕೇಂದ್ರ ವ್ಯಾಪ್ತಿಯ 27,748 ಕುಟುಂಬಗಳಿಗೆ 31.19 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1935 ಕುಟುಂಬಗಳಿಗೆ 1.98 ಕೋಟಿ ರೂ. ಸೇರಿದಂತೆ ಸುಮಾರು 33.18 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,182 ಪಡಿತರ ಚೀಟಿಗಳಿಗೆ 1,89,26,610ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಯುವ ನಿಯೋಜನೆಯಡಿ 484 ಫಲಾನುಭವಿಗಳಿಗೆ 43ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 1.22 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, 42.77 ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.

ಲೋಡ್ ಶೆಡ್ಡಿಂಗ್ ಕಡಿಮೆಗೊಳಿಸಿ:
ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರವುದರಿಂದ ಮಕ್ಕಳ ಅಧ್ಯಯನಕ್ಕೆ ತೊಂದರೆಯಾಗದಂತೆ ಅನಕೃತ ಲೋಡ್ ಶೆಡ್ಡಿಂಗ್‌ಗೆ ಕಡಿವಾಣ ಹಾಕಬೇಕು ಎಂದು ಮೆಸ್ಕಾಂ ಇಲಾಖಾಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಅರವಿಂದ ಪೂಜಾರಿ ಅವರು ಮಾತನಾಡಿ ತಾಲೂಕಿನ ವಿವಿಧ ಭಾಗಗಳಿಗೆ ಬಸ್ ಸೌಲಭ್ಯವಿಲ್ಲದೇ ಮಹಿಳೆಯರು ಉಚಿತ ಬಸ್ ಸೇವೆಯಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳುವುದು ಸಮಸ್ಯೆಯಾಗುತ್ತಿದೆ ಎಂದರು. ತಾಲೂಕು ಕೇಂದ್ರದ ತುತ್ತತುದಿಯಲ್ಲಿರುವ ಹಳ್ಳಿಹೊಳೆ ಭಾಗದ ಜನರಿಗೆ ತಾಲೂಕು ಕೇಂದ್ರಕ್ಕೆ ಬರಲು ಕೆಎಸ್‌ರ್‌ಡಿಸಿ ಬಸ್ ವ್ಯವಸ್ಥೆಯಿಲ್ಲದ ಕಾರಣ ತೊಂದರೆಗೀಡಾಗಿದ್ದಾರೆ, ಹೀಗಾಗಿ ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಸಮಿತಿಯ ಸದಸ್ಯರೊಬ್ಬರು ವಿನಂತಿಸಿದರು, ಅಲ್ಲದೇ ಕೊಲ್ಲೂರು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಮಾಲಕರು ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ, ಅದನ್ನು ತೆರವುಗೊಳಿಸಲು ಇಲಾಖಾಕಾರಿಗಳು ಪ್ರಯತ್ನಿಸಬೇಕು ಎಂದರು.
ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷರು, ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ಫರ್ಮಿಟ್ ಸಂಖ್ಯೆಗಳ ಬಗ್ಗೆ, ಹಾಗೂ ಪ್ರಸ್ತುತ ಸಂಚರಿಸುತ್ತಿರುವ ಬಸ್‌ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಬೇಕು . ಅಲ್ಲದೇ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿರುವ ಬಸ್‌ಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಅಕಾರಿಗಳಿಗೆ ಸೂಚನೆ ನೀಡಿದರು. ತಡೆಯಾಜ್ಞೆವಿರುವ ಫರ್ಮಿಟ್‌ಗಳ ಬಗ್ಗೆ ತೆರವುಗೊಳಿಸುವ ಸಂಬಂಧ ಮೇಲಾಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ಡಾ. ರವಿಕುಮಾರ್ ಹುಕ್ಕೇರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಪ್ರಭಾಕರ ನಾಯ್ಕ, ಮಾಲತಿ ಶಿವಾನಂದ, ರಾಮ ಪೂಜಾರಿ, ಅನೀಶ್ ಪೂಜಾರಿ, ರಾಘವೇಂದ್ರ ಬಿಲ್ಲವ, ದೇವದಾಸ್ ವಿ.ಜೆ., ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್ ಉಪಸ್ಥಿತರಿದ್ದರು.