ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರ್ಕಾರ ಹೊರಡಿಸುವ ಸುತ್ತೋಲೆ, ಆದೇಶಗಳು ಪಂಚಾಯತ್ ರಾಜ್ ವ್ಯವಸ್ಥೆಯ ಒಂದೊಂದೇ ಕಲ್ಲುಗಳನ್ನು ಬೀಳಿಸುತ್ತಿದೆ. ಇದನ್ನು ತಡೆದು ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕಾದರೆ, ಸ್ಥಳೀಯವಾಗಿ ಗ್ರಾಮ ಸರ್ಕಾರಗಳು ಬಲವಾಗಬೇಕು. ಚುನಾಯಿತ ಪ್ರತಿನಿಧಿಗಳಾದ ನೀವೆಲ್ಲಾ ಒಟ್ಟಾಗಿ ಧ್ವನಿ ಎತ್ತಬೇಕು. ಈ ಹೋರಾಟಕ್ಕೆ ನನ್ನ ವ್ಯಾಪ್ತಿಯಲ್ಲಿ ಆಗುವ ಎಲ್ಲಾ ಸಹಕಾರಗಳನ್ನು ನೀಡುವುದಾಗಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು
ಅವರು ಮಂಗಳವಾರದಂದು ಉಡುಪಿ ಜಿಲ್ಲಾಡಳಿತ ಭವನ, ರಜತಾದ್ರಿ ಮಣಿಪಾಲ ಅಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ನಡೆಸಿದ ಸ್ಥಳೀಯ ಸರ್ಕಾರದ ಉಳಿವಿಗಾಗಿ ಒಕ್ಕೊರಲ ಪ್ರತಿಭಟನೆಯ ಸಮಯದಲ್ಲಿ ಪಂಚಾಯತ್ ಪ್ರತಿನಿಧಿಗಳು ಮಾಡಿದ ಹಕ್ಕೊತ್ತಾಯಗಳಿಗೆ ಪ್ರತಿಕ್ರಿಯಿಸಿದರು.
ಕುಂದಾಪುರ ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ, ಸ್ಥಳೀಯ ಸ್ವಯಂ ಸರ್ಕಾರವನ್ನು ಉಳಿಸಲು ಮತ್ತು ಬಲಪಡಿಸಲು ನಾವೆಲ್ಲಾ ಒಗ್ಗಟ್ಟಾಗಿ ಕಾರ್ಯಪ್ರವತ್ತರಾಗಬೇಕು. ಹಿಂದಿನಿಂದಲೂ ಹಲವಾರು ರೀತಿಯಲ್ಲಿ ವಿವಿಧ ಹಂತದ ಸರ್ಕಾರಗಳಿಂದ ನಿರಂತರವಾಗಿ ಗ್ರಾಮ ಸರ್ಕಾರಗಳ ಅಧಿಕಾರಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇಂದಿನ ಪ್ರತಿಭಟನೆಯು ಇಂತಹ ಪ್ರಯತ್ನಗಳನ್ನು ತಡೆಯುವುದಕ್ಕಾಗಿ ಹಾಗೂ ಸಂವಿಧಾನದತ್ತ ಗ್ರಾಮಸಭಾದ ಹಕ್ಕು ಮತ್ತು ಸ್ಥಳೀಯ ಸರ್ಕಾರದ ಅಧಿಕಾರವನ್ನು ಎತ್ತಿಹಿಡಿಯುವುದಕ್ಕಾಗಿ ಇಂದು ನಮ್ಮ ಹಕ್ಕೊತ್ತಾಯಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಕಳುಹಿಸಿದ್ದೇವೆ ಎಂದರು.
ಈ ಎಲ್ಲಾ ಹಕ್ಕೊತ್ತಾಯಗಳನ್ನು ನೇರವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರನ್ನು ಹಾಗೂ ವಿಧಾನ ಪರಿಷತ್‌ಗೆ ಸ್ಥಳೀಯಾಡಳಿತದಿಂದ ಆಯ್ಕೆಯಾದ ಪ್ರತಿನಿಧಿಗಳನ್ನು ನಮ್ಮ ಒಕ್ಕೂಟದ ನಿಯೋಗವು ಭೇಟಿ ಮಾಡಿ ಚರ್ಚಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸುವುದು, ಜೊತೆಗೆ ಗ್ರಾಮ ಪಂಚಾಯತೆಗೆ ಸಂಬಂಧಿಸಿದಂತೆ ಸಿಬ್ಬಂದಿಗಳ ನೇಮಕಾತಿ ಮತ್ತು ಏಕ ವಿನ್ಯಾಸ ನಕ್ಷೆಯಲ್ಲಿ ಇರುವ ಗೊಂದಲಗಳ ಕುರಿತಾಗಿ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲು ಒಕ್ಕೂಟ ನಿರ್ಧರಿಸಿರುವುದಾಗಿ ಮುಂದಿನ ಯೋಜನೆಯನ್ನು ವಿವಿರಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ವಿವಿಧ ಗ್ರಾಮ ಪಂಚಾಯತ್‌ಗಳ ಪ್ರತಿನಿಧಿಗಳಲ್ಲಿ ಬಿ. ದಿನಕರ ಶೆಟ್ಟಿ ಬನ್ನೂರು, ಬಸವ ಪಿ. ಮೊಗವೀರ ಹಲ್ಲಾಡಿ ಹೆಟ್ ಪ್ರಕಾಶ್ ಶೆಟ್ಟಿ ಯರಾಡಿ, ಇಂದಿರಾ ಶೆಟ್ಟಿ ಮೊಳಹಳ್ಳಿ, ಚಂದ್ರಿಕಾ ಮೊಳಹಳ್ಳಿ, ಮೋಹನ್‌ಚಂದ್ರ ಉಪ್ಪುಂದ ರಮೇಶ್ ಶೆಟ್ಟಿ ಎದುರಿಸುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ತೆರೆದಿದ್ದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಈ ಹಕ್ಕೊತ್ತಾಯದ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಉಡುಪಿ, ಹೆತ್ತಿ ಬ್ರಹ್ಮಾವರ ಕಾಪು ತಾಲೂಕುಗಳ ಗ್ರಾಮ ಪಂಚಾಯತ್‌ಗಳಿಂದ ಸುಮಾರು 300 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಹೊಕ್ಕೊತ್ತಾಯ ಆಂದೋಲನದ ಕಾರ್ಯಲಯದ ಸದಸ್ಯರಾದ ಶ್ರೀನಿವಾಸ ಗಾಣಿಗ ಅವರು ನಿರ್ವಹಿಸಿದರೆ, ಕೃಪಾ ಎಮ್. ಎಮ್.ಅವರು ಗ್ರಾಮ ಸಭೆ ಮತ್ತು ಸ್ಥಳೀಯ ಸರ್ಕಾರದ ಹಕ್ಕು ಮತ್ತು ಅಧಿಕಾರಿಗಳ ಬಗ್ಗೆ ಭಾಗವಹಿಸಿದವರೊಂದಿಗೆ ಚರ್ಚಿಸಿದರು.

