ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಸ್ಕಾರ ಹಾಗೂ ಸಂಸ್ಕೃತಿಯ ಅರಿವು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಬೇಕು ಎಂದು ಕರಾವಳಿ ಪೊಲೀಸ್ ಪಡೆಯ ನಿರೀಕ್ಷಕ ಪ್ರಮೋದ್ ಕುಮಾರ್ ಹೇಳಿದರು.
ಅವರು ಇಲ್ಲಿನ ಪಡುಕೇರಿಯ ಒಂಬತ್ತುದಂಡಿಗೆ ಚಿಕ್ಕಮ್ಮ ದೇವಸ್ಥಾನದಲ್ಲಿ ನಡೆದ ಯುವ ಮಿತ್ರವೃಂದದ 30ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಮಾತನಾಡುತ್ತಾ, ಅಧಿಕಾರ, ಅಂತಸ್ತು ಏರಿಕೆಯಾದಾಗ ನಮ್ಮ ಬೆಳವಣಿಗೆಯ ಹಿಂದಿನ ಹೆಜ್ಜೆಗಳನ್ನು ಮರೆಯಬಾರದು. ಆಧುನಿಕತೆಯ ಉಪಯೋಗವನ್ನು ಮಾತ್ರ ಪಡೆದುಕೊಂಡು ಅಪಾಯದಿಂದ ದೂರವಿರಬೇಕು. ಒಗ್ಗಟ್ಟು ಹಾಗೂ ಸಂಘಟನಾ ಆಸಕ್ತಿಗಳು ಸಮೃದ್ಧವಾಗಿದ್ದಾಗ ಸಂಘಟನೆಗಳು ಶಕ್ತಿಯುತವಾಗಿ ಬೆಳೆಯುತ್ತದೆ ಎಂದರು.
ಯುವ ಮಿತ್ರ ವೃಂದ ಅಧ್ಯಕ್ಷ ಅಮರ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2024-25ನೇ ಸಾಲಿನಲ್ಲಿ ಕಾರ್ತಿಕ ದೀಪೋತ್ಸವ, ಧಾರ್ಮಿಕ, ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ, ಸಾಮಾಜಿಕ, ಕ್ರೀಡೆ ಸೇರಿದಂತೆ ಮಾನವೀಯ ಮೌಲ್ಯದ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಮಹತ್ವಾಕಾಂಕ್ಷೆಯ “ ತುರ್ತು ನಿಧಿ ” ಯೋಜನೆಗೂ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಶ್ರೀ ಚಿಕ್ಕಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ್ ಕಾಮಧೇನು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಉದ್ಯಮಿ ದಿನೇಶ್ ಕುಂದಾಪುರ, ಶ್ರೀ ಚಿಕ್ಕಮ್ಮ ದೇವಸ್ಥಾನದ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಭಾವತಿ ಕೇಶವ, ಯುವ ಮಿತ್ರವೃಂದದ ಗೌರವಾಧ್ಯಕ್ಷ ನಾಗರಾಜ್ ಕೆಳಮನೆ, ಕಾರ್ಯದರ್ಶಿ ಮಹೇಶ್ ನಾಯ್ಕ್ ಇದ್ದರು.
ಸಮಾಜ ಸೇವೆಗಾಗಿ ಸುರೇಂದ್ರ ಅವರಿಗೆ ಯುವ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ವಾಲಿಬಾಲ್ ಆಟಗಾರ ಸೂರಜ್ ಕುಮಾರ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಮಹಿಳಾ ಯಕ್ಷಗಾನ, ಪುಟಾಣಿಗಳ ಯಕ್ಷಗಾನ, ನೃತ್ಯ ಕಾರ್ಯಕ್ರಮ, ಛದ್ಮವೇಷ ಸ್ಪರ್ಧೆ, ಮನು ಹಂದಾಡಿಯವರಿಂದ ನಗೆ ಹನಿ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಿತು. ವಾರ್ಷಿಕ ಕ್ರೀಡೋತ್ಸವ, ಚಿತ್ರಕಲೆ, ರಂಗೋಲಿ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಓಂಕಾರ್ ಕಲಾವಿದರ ತಂಡದಿಂದ “ವಾಚ್ ಮ್ಯಾನ್” ನಗೆ ನಾಟಕದ ಪ್ರದರ್ಶನ ನಡೆಯಿತು.
ನಿವೃತ್ತ ಪೊಲೀಸ್ ಅಧಿಕಾರಿ ಮನಮೋಹನ್ ನಿರೂಪಿಸಿದರು, ಕೋಶಾಧಿಕಾರಿ ಸಂಪತ್ ಕೆಳಮನೆ ವಂದಿಸಿದರು.

