Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತುರ್ತು ಚಿಕಿತ್ಸೆ, ಡಯಾಲಿಸಿಸ್ ಮತ್ತು ವಿಶೇಷ ಆರೋಗ್ಯ ಸೇವೆಗಳ ಪ್ರಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
 ಇಲ್ಲಿನ ಅಂಜಲಿ ಆಸ್ಪತ್ರೆಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ವತಿಯಿಂದ  ತುರ್ತು ಚಿಕಿತ್ಸೆ ಮತ್ತು ಆರೈಕೆ, ಡಯಾಲಿಸಿಸ್ ಮತ್ತು ವಿಶೇಷ ಆರೋಗ್ಯ ಸೇವೆಗಳನ್ನು ಪ್ರಾರಂಭಿಸಲಾಗಿದ್ದು ಇಂದು ಲೋಕಾರ್ಪಣೆಗೊಳಿಸಲಾಯಿತು.

ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಹೊಸ ಆರೋಗ್ಯ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿ,  ಆರೋಗ್ಯ ಸೇವೆ ವಂಚಿತ ಪ್ರದೇಶಗಳಿಗೆ ವೈದ್ಯಕೀಯ ಪ್ರವೇಶವನ್ನು ವಿಸ್ತರಿಸುವ ಮಹತ್ವವನ್ನು ತಿಳಿಸಿದರು. ಈ ಪ್ರದೇಶದಲ್ಲಿ ಆರೋಗ್ಯ ಸೇವೆಯ ಬೆಳವಣಿಗೆ ಮತ್ತು ಹೊಸ ಸೇವೆಗಳು ಸಮುದಾಯದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮದ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ವಿಶೇಷ ಆರೈಕೆ ನೀಡುವ ಮಹತ್ವದ ಬಗ್ಗೆ ಮಾತನಾಡಿದರು. ಅವರು ಈ ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಈ ಪ್ರದೇಶಕ್ಕೆ ವಿಶ್ವ ದರ್ಜೆಯ ಆರೋಗ್ಯ ಸೇವೆಗಳನ್ನು ತರುವ ಪ್ರಯತ್ನಗಳನ್ನು ಶ್ಲಾಘಿಸಿದರು.

ನಾಕಟ್ಟೆ ತಿಮ್ಮಪ್ಪ ಶೆಟ್ಟಿ ಅವರು ತುರ್ತು ಆರೈಕೆ ಸೇವೆಗಳನ್ನು ಉದ್ಘಾಟಿಸಿದರು. ಡಾ. ಆನಂದ್ ವೇಣುಗೋಪಾಲ್  ನವೀಕೃತ ಫಾರ್ಮಾಸಿಯನ್ನು ಉದ್ಘಾಟಿಸಿದರು.

ಮಾಹೆ ಬೋಧನಾ ಆಸ್ಪತ್ರೆಯ ಸಿಒಒ ಡಾ. ಆನಂದ್ ವೇಣುಗೋಪಾಲ್, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ್‌, ಸಮೃದ್ಧ ಬೈಂದೂರು ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಬಿ. ಎಸ್‌. ಸುರೇಶ್‌ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಅಂಜಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಣ್ಣಪ್ಪ ಶೆಟ್ಟಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

ಅಂಜಲಿ ಆಸ್ಪತ್ರೆ ಎಂ.ಡಿ ಡಾ. ಅಣ್ಣಪ್ಪ ಶೆಟ್ಟಿ ಅವರು ಸ್ವಾಗತಿಸಿದರು. ಅಂಜಲಿ ಆಸ್ಪತ್ರೆಯಲ್ಲಿ ಕಸ್ತೂರ್ಬಾ ಆಸ್ಪತ್ರೆಯಿಂದ ಬೆಂಬಲಿತವಾದ ಆರೋಗ್ಯ ಸೇವೆಗಳ ಅವಲೋಕನವನ್ನು ಡಾ. ಅವಿನಾಶ್ ಶೆಟ್ಟಿ ಒದಗಿಸಿದರು. ಮಣಿಪಾಲದ ಮಾರ್ಕೆಟಿಂಗ್ ಮ್ಯಾನೇಜರ್ ಮೋಹನ್ ಶೆಟ್ಟಿ ಅವರ ಧನ್ಯವಾದಗೈದರು. ರಾಜೇಶ್‌ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಮಾರ್ಚ್ 17ರಿಂದ ತುರ್ತು ಚಿಕಿತ್ಸೆ,  ಡಯಾಲಿಸಿಸ್  ಮತ್ತು  ಮೂತ್ರಪಿಂಡ ತಜ್ಞರ  ಸಮಾಲೋಚನೆ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಮುಂದೆ  ಹೃದ್ರೋಗ, ಮೂಳೆಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ನೇತ್ರವಿಜ್ಞಾನ, ಶಸ್ತ್ರಚಿಕಿತ್ಸೆ  ಸೇರಿದಂತೆ ವಿಶೇಷ  ಸಮಾಲೋಚನಾ ಸೇವೆಗಳನ್ನು  ಆರಂಬಿಸಲಾಗುತ್ತದೆ.

Exit mobile version