ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬಾಲ್ಯದಲ್ಲಿ ಮಕ್ಕಳಿಗೆ ದೊರೆಯಬೇಕಾಗಿರುವ ಸನಾತನ ಸಂಸ್ಕೃತಿ, ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಶಿಶು ಮಂದಿರ ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿದೆ. ಶಿಶು ಮಂದಿರದಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣದ ಪ್ರಯೋಜನ ಮಕ್ಕಳ ಪೋಷಕರಿಗೂ ದೊರೆಯುತ್ತಿದೆ. ಶಿಶು ಮಂದಿರದ ಚಟುವಟಿಕೆ ಹಾಗೂ ಶಿಕ್ಷಣ ಮಕ್ಕಳ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತಿದೆ ಎಂದು ಕುಂದಾಪುರ ಸೇವಾ ಸಂಗಮ ಟ್ರಸ್ಟ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.
ಅವರು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ನಡೆದ ಪಾಲಕರ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಅಧ್ಯಕ್ಷ ಬಿ. ರಾಘವೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥೆ ಚಂದ್ರಿಕಾ ಧನ್ಯ, ಮಕ್ಕಳ ವಿಚಾರದಲ್ಲಿ ಪೋಷಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಅವರ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.
ಶಿಶು ಮಂದಿರದ ಸದಸ್ಯರಾದ ಸವಿತಾ ಯು. ದೇವಾಡಿಗ, ಬಿ. ಲಕ್ಷ್ಮೀಕಾಂತ ಮಡಿವಾಳ, ವಸಂತಿ ಎನ್. ಖಾರ್ವಿ ಮತ್ತು ಗಾಯತ್ರಿ ಕೊಡಂಚ, ಕುಂದಾಪುರ ಶಿಶು ಮಂದಿರದ ಅಧ್ಯಕ್ಷೆ ಕಲ್ಪನಾ, ಪೋಷಕರು ಮೊದಲಾದವರು ಉಪಸ್ಥಿತರಿದ್ದರು.
ರೇವತಿ ವೆಂಕಟೇಶ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶಿಶು ಮಂದಿರದ ಸಂಚಾಲಕ ಡಾ. ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಅಶ್ವಿತಾ ಜಿ. ಪೈ. ವಂದಿಸಿದರು.

