Kundapra.com ಕುಂದಾಪ್ರ ಡಾಟ್ ಕಾಂ

ಟ್ಯಾಂಕರ್ ನೀರಿನ ಗುಣಮಟ್ಟದ ಪರೀಕ್ಷೆ ಅಗತ್ಯ: ಕೆ. ವಿಕಾಸ್ ಹೆಗ್ಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಕುಡಿಯುವ ನೀರಿನ ಮೂಲ, ಅದರ ಗುಣಮಟ್ಟ ಹಾಗೂ ಟ್ಯಾಂಕರ್‌ನ ಸ್ವಚ್ಛತೆ ಬಗ್ಗೆ ಜಿಲ್ಲಾಡಳಿತ ವಿಶೇಷ ಮುತುವರ್ಜಿವಹಿಸಬೇಕು ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಈಗಾಗಲೇ ಬೇಸಗೆಯ ಬಿಸಿ ಏರುತ್ತಿದೆ. ಈ ಭಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾದರೂ ಸಹ ಬಿಸಿಲ ಬೇಗೆ ಹೆಚ್ಚಿರುವುದರಿಂದ ನೀರಿನ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆಯೂ ಹೆಚ್ಚಿದೆ. ನೀರಿನ ಪ್ರಮಾಣ ಕುಸಿಯದೆ ಇದ್ದರೂ ಸಹ ಹೆಚ್ಚಿನ ಗ್ರಾಮ ಪಂಚಾಯತ್ ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವುದು ಒಂದು ವ್ಯವಸ್ಥಿತ ವ್ಯವಹಾರವಾಗಿ ಬಿಟ್ಟಿದೆ. ಇವತ್ತು ಕಲುಷಿತ ಆಹಾರ ಹಾಗೂ ಕಲುಷಿತ ನೀರಿನಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಈ ಕಾಲಘಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸುವಾಗ ಕುಡಿಯಲು ಯೋಗ್ಯವಲ್ಲದ ನೀರನ್ನು ಹೆಚ್ಚಿನ ಕಡೆ ಸರಬರಾಜು ಮಾಡುತ್ತಿರುರುವುದು ಕಂಡು ಬರುತ್ತಿದೆ.

ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಮುತುವರ್ಜಿ ವಹಿಸಬೇಕು, ನೀರು ಯಾವ ಮೂಲದಿಂದ ಸರಬರಾಜು ಆಗುತ್ತಿದೆ, ಅದು ಉಪಯೋಗಿಸಲು ಯೋಗ್ಯವಾದುದಾ ಅಥವಾ ಇಲ್ಲವಾ ಎಂದು ಹಾಗೂ ನೀರು ಸರಬರಾಜು ಮಾಡುವ ಟ್ಯಾಂಕರ್ ಗಳ ಗುಣಮಟ್ಟವನ್ನೂ ಸಹ ಪರೀಕ್ಷೆ ಮಾಡಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.

Exit mobile version