ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಮಹಿಳಾ ವೇದಿಕೆ ಮತ್ತು ಶ್ರೀ ಮಾತಾಮೃತಾನಂದಮಯಿ ಮಠ ಕೇರಳ ಇದರ ಆಯುರಾರೋಗ್ಯ ಸೌಖ್ಯಂ ಫೌಂಡೇಶನ್ ಇದರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಪರಿಸರ ಸ್ನೇಹಿಯಾದ ಮತ್ತು ಬಾಳೆದಿಂಡನ್ನು ಉಪಯೋಗಿಸಿ ಉತ್ಪಾದಿಸಿದ ಸೌಖ್ಯಂ ಸ್ಯಾನಿಟರಿ ಪ್ಯಾಡ್ ಗಳ ಉಚಿತ ವಿತರಣೆ ಕಾರ್ಯಕ್ರಮವು ಗುರುವಾರದಂದು ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನೆಕ್ಸಸ್ ಮಾಲ್ ಇದರ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ನಿಶಾ ಅಂಚನ್ ಅವರು ಮಾತನಾಡಿ, ಪರಿಸರ ರಕ್ಷಣೆ ಮತ್ತು ಮಹಿಳೆಯರು ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಋತುಚಕ್ರದ ಸಮಯದಲ್ಲಿ ಈ ಮರುಬಳಕೆ ಮಾಡಬಹುದಾದ ಪ್ಯಾಡ್ ಗಳ ಬಳಕೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.
ಆಯುರಾರೋಗ್ಯ ಸೌಖ್ಯ ಫೌಂಡೇಶನ್‌ನ ಕುಂದಾಪುರ ವಿಭಾಗದ ಪ್ರತಿನಿಧಿಯಾದ ಕಲ್ಪನಾ ಭಾಸ್ಕರ್ ಅವರು ಮಾತನಾಡಿ, ಸೌಖ್ಯಂ ಪಾಡ್ ಗಳನ್ನು ಸುಮಾರು ಆರು ವರ್ಷಗಳ ಕಾಲ ಬಳಸಬಹುದಾಗಿದ್ದು ಇದರ ಉಪಯುಕ್ತತೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಅವಶ್ಯಕತೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ ಹಾಗೂ ಮಹಿಳಾ ವೇದಿಕೆಯ ಸಂಚಾಲಕರಾದ ರೋಹಿಣಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ನೆಕ್ಸಸ್ ಮಾಲ್ ಮಂಗಳೂರು ಅವರ ಪ್ರಾಯೋಜಕತ್ವದಲ್ಲಿ ಕಾಲೇಜಿನ 250 ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೌಖ್ಯಂ ಪ್ಯಾಡ್ ಗಳನ್ನು ವಿತರಿಸಲಾಯಿತು.