Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ : ಸಂಭ್ರಮದ ಮನ್ಮಹಾರಥೋತ್ಸವ ಸಂಪನ್ನ

ಬೈಂದೂರು: ಇಲ್ಲಿನ ಪ್ರಸಿದ್ದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಮನ್ಮಹಾ ರಥೋತ್ಸವ ಉಪ್ಪುಂದ ಕೊಡಿಹಬ್ಬ ಗುರುವಾರ ಸಡಗರ ಸಂಭ್ರಮದಿಂದ ಜರುಗಿತು.

ದೇವಳದ ಕಾರ್ಯನಿರ್ವಹಣಾಕಾರಿ ಟಿ. ಜಿ. ಸುಧಾಕರ್ ಅವರ ಉಸ್ತುವಾರಿ ಹಾಗೂ ಗೋಕರ್ಣದ ತಂತ್ರಿ ಹಿರೇಗಂಗೆ ಗಣಪತಿ ಭಟ್ ನೇತೃತ್ವದಲ್ಲಿ ದೇವಳದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಕ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ವಿಶೇಷ ಆಸಕ್ತಿಯಿಂದ ಹೆಚ್ಚಿನ ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಸೀರೆಗಳನ್ನು ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು.

ಈ ಸಾಲಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ಜಾತ್ರೆ ಉಪ್ಪುಂದ ಕೊಡಿಹಬ್ಬವಾಗಿದ್ದು, ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ನ.೨೧ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ದೇವಳದ ಮನವಿ ಮೇರೆಗೆ ಊರಿನ ಹತ್ತು ಸಮಸ್ತರು, ಭಕ್ತಾದಿಗಳು ಸೇರಿ ತಮ್ಮ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಶುಕ್ರವಾರ ರಾತ್ರಿ ದೇವರ ಅವಭ್ರತಸ್ನಾನ ನಡೆಯಲಿದೆ. ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಬೈಂದೂರು ವಿಶೇಷ ತಹಶೀಲ್ದಾರ ಕಿರಣ್ ಗಿ ಗೌರಯ್ಯ, ಪ್ರಧಾನ ಅರ್ಚಕ ಪ್ರಕಾಶ ಉಡುಪ ಮುಂತಾದವರು ಉಪಸ್ಥಿತರಿದ್ದರು. 

Exit mobile version