ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಜರುಗಿತು. ಈ ವೇಳೆ ಸಮಗ್ರ ಒಳಚರಂಡಿ ಯೋಜನೆ ಕುರಿತಂತೆ ಗಂಭೀರ ಚರ್ಚೆ ನಡೆಯಿತು.
ಪುರಸಭಾ ಸದಸ್ಯ ರಾಘವೇಂದ್ರ ಖಾರ್ವಿ ವಿಷಯ ಪ್ರಸ್ತಾಪಿಸಿ ಖಾರ್ವಿಕೇರಿ, ಮದ್ದುಗುಡ್ಡೆ ಪ್ರದೇಶಗಳು ಪುರಸಭೆಯ 23 ವಾರ್ಡ್‌ಗಳ ಕೊಳಚೆ ನೀರಿನೊಂದಿಗೆ ಬದುಕುವಂತಾಗಿದೆ. ಯೋಜನೆ ಪೂರ್ಣತೆಗೆ ಸರಕಾರ ಈಗ ಅವಕಾಶ ನೀಡಿದ್ದರು ಭೂಸ್ವಾಧೀನತೆ ಗುಮ್ಮ ಮುಂದಿಟ್ಟುಕೊಂಡು ವಿಳಂಬಗೊಳಿಸುವ ಯತ್ನ ಸಲ್ಲ. ಮತ್ತೆ ವಿಳಂಬಗೊಳಿಸಿದ್ದೇ ಆದಲ್ಲಿ ಪುರಸಭೆ ಎದುರು ಕುಳಿತುಕೊಳ್ಳುತ್ತೇವೆ ಎಂದು ಆಕ್ರೋಶ ಹೊರಗೆಡಹಿದರು.

ಪುರಸಭಾ ಸದಸ್ಯ ಗಿರೀಶ್ ಜಿ.ಕೆ. ಮಾತನಾಡಿ ನಗರದಲ್ಲಿ ಸಮಗ್ರ ಒಳಚರಂಡಿ ಯೋಜನೆ ಜಾರಿಗೊಂಡು ದಶಕ ಸಂದರೂ ಯೋಜನೆ ಪೂರ್ಣಗೊಂಡಿಲ್ಲ. ಸಮಯ ವಿಳಂಬಗೊಳಿಸದೆ ಯೋಜನೆ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾಮನಿರ್ದೇಶಿತ ಸದಸ್ಯ ಗಣೇಶ್ ಶೇರುಗಾರ್ ಮಾತನಾಡಿ, ಸಿದ್ದರಾಮಯ್ಯ ಈ ಅವರ ಮೊದಲ ಅವಧಿಯ ಸರಕಾರದಲ್ಲಿ ಯೋಜನೆ ಮಂಜೂರುಗೊಂಡು, ಯಡಿಯೂರಪ್ಪ ಅವರ ಅವಧಿಯಲ್ಲಿ ಅನುಷ್ಠಾನಗೊಂಡು ಮತ್ತೆ ಸಿದ್ದರಾಮಯ್ಯ ಸರಕಾರ ರಚನೆಯಾಗಿದ್ದರು ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎನ್ನುವುದು ವಿಷಾದನೀಯ ಎಂದರು.
ಯೋಜನೆಯ ಎಂಜಿನಿಯರ್ ರಕ್ಷಿತ್ ಕಾಶ ಪ್ರತಿಕ್ರಿಯಿಸಿ ಯೋಜನೆಯಡಿ ಬಾಕಿ ಉಳಿದಿರುವುದು ವೆಟ್‌ವೆಲ್ ಮತ್ತು ಎಸ್‌ಟಿಪಿ ಪ್ಲಾಂಟ್ ರಚನೆ ಮಾತ್ರ. ಸಿಆರ್ ಝಡ್ ಕ್ಲಿಯರೆನ್ಸ್ ಪಡೆಯಲು 5-6 ವರ್ಷ ಕಳೆದುಹೋಯಿತು. ಇದೀಗ ಕ್ಲಿಯರೆನ್ಸ್ ದೊರಕಿದೆ. ನಗರಾಭಿವೃದ್ಧಿ ಇಲಾಖೆಯು ಹೇಶ್ ಅನುಮತಿ ನೀಡಿದೆ. ಹಳೆಯ ಮಾದರಿಯಲ್ಲಿ 6.5ಕೋಟಿ ರೂ. ಮತ್ತು ಹೊಸ ಮಾದರಿಯ ತಂತ್ರಜ್ಞಾನದಡಿ 7.5 ಕೋಟಿಯಲ್ಲಿ ಅನುಷ್ಠಾನಗೊಳಿಸಬಹುದಾಗಿದೆ ಎಂದರು.
ಯುಜಿಡಿ ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿ ಅನುಷ್ಠಾನಕ್ಕೆ 44ಕೋಟಿ ರೂ. ಮಂಜೂರಾಗಿದೆ. ಯೋಜನೆ ಅನುಷ್ಠಾನಕ್ಕೆ ಆಡಳಿತ ಸಹಕರಿಸಿದರೆ ಶೀಘ್ರ ಅನುಷ್ಠಾನ ಕೈಗೆತ್ತಿಕೊಳ್ಳಲಾಗುವುದು ಎಂದು ಕೆಯುಐಡಿಎಫ್‌ಸಿ ಎಂಜಿನಿಯರ್‌ಗಳು ಸಭೆಯ ಗಮನಕ್ಕೆ ತಂದರು.
ಎಸ್‌ಟಿಪಿ ಪ್ಲಾಂಟ್ ಅನುಷ್ಠಾನಗೊಳ್ಳಲಿರುವ ವಾರ್ಡ್ ಸದಸ್ಯ ಶೇಖರ ಪೂಜಾರಿ ಮಾತನಾಡಿ, ಪ್ಲಾಂಟ್ ರಚನೆಗೆ ನಮ್ಮ ಇಲ್ಲ ವಿರೋಧವಿಲ್ಲ, ನಿಗದಿತ ಸ್ಥಳಕ್ಕಿಂತ ಕೊಂಚ ದೂರದಲ್ಲಿ ಮಾಡಿದ್ದಲ್ಲಿ ಅನುಕೂಲ ಎಂದರು. ಈ ವಿಚಾರದಡಿ ಸದಸ್ಯರು ಪರಸ್ಪರ ಅಭಿಪ್ರಾಯ ಮಂಡಿಸಿದ ಬಳಿಕ ಅಂತಿಮವಾಗಿ ನಿಗದಿತ ಸ್ಥಳದಲ್ಲೇ ಎಸ್‌ಟಿಪಿ ಪ್ಲ್ಯಾಂಟ್ ರಚಿಸುವ ನಿರ್ಣಯ ಕೈಗೊಳ್ಳಲಾಯಿತು.
ನಾಮನಿರ್ದೇಶಿತ ಸದಸ್ಯ ಗಣೇಶ್ ಶೇರುಗಾರ್ ಮಾತನಾಡಿ ಪುರಸಭಾ ಅಧ್ಯಕ್ಷರು ದಾಖಲೆಯಿಲ್ಲದೆ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪ ನಿರಾಧಾರ. ಮನೆ ನಿರ್ಮಾಣಕ್ಕೆ ಬೇಕಾದ ದಾಖಲೆಗಳು ಅವರು ಪಡೆದು ಕೊಂಡಿರುವ ಬಗ್ಗೆ ಅವರಲ್ಲಿ ದಾಖಲೆಯಿದೆ. ಪುರಸಭೆಯಲ್ಲಿ ಕಡತ ಇಲ್ಲ ಅನ್ನುವುದು ಹಾಸ್ಯಾಸ್ಪದ. ಜಾಲತಾಣದಲ್ಲಿ ಅಧ್ಯಕ್ಷರ ಕುರಿತು ಬರೆದಿರುವ ವಿಚಾರ ಅಥವಾ ಆರೋಪ ಪ್ರಾಮಾಣಿಕ ವ್ಯಕ್ತಿಗೆ ಮಾಡಿದ ಅವಮಾನ ಎಂದು ಹೇಳಿದರು. ಸದಸ್ಯರಾದ ಸಂತೋಷ್ ಶೆಟ್ಟಿ, ಅಬ್ಬು ಮಹಮ್ಮದ್ ಧ್ವನಿಗೂಡಿಸಿದರು.
ಸದಸ್ಯ ರಾಘವೇಂದ್ರ ಖಾರ್ವಿ ಮಾತನಾಡಿ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ಜಾಲತಾಣದಲ್ಲಿ ಅಧ್ಯಕ್ಷರ ಕುರಿತಾದ ಆರೋಪ ಹಂಚಿಕೊಂಡಿರುವುದು ಸರಿಯಲ್ಲ ಎಂದರು. ಕಾಂಗ್ರೆಸ್ ಸದಸ್ಯ ಶ್ರೀಧರ ಶೇರೆಗಾರ್ ಆಕ್ಷೇಪ ವ್ಯಕ್ತಪಡಿಸಿದರು. ಜಾಲತಾಣದಲ್ಲಿ ಅನೇಕ ಸಂಗತಿಗಳು ಬರುತ್ತವೆ. ಅದನ್ನು ಶೇರ್ ಮಾಡಿದ್ದು ತಪ್ಪು ಅನ್ನುವುದು ಸಹ ತಪ್ಪು ಎಂದರು. ಸದಸ್ಯೆ ಪ್ರಭಾವತಿ ಶೆಟ್ಟಿ ಇದಕ್ಕೆ ಪ್ರತಿಕ್ರಿಯಿಸಿ, ಅಧ್ಯಕ್ಷರ ಕುರಿತಾದ ವಿಷಯವನ್ನು ನನಗೆ ಯಾರೊ ಕಳುಹಿಸಿದ್ದರು. ನಾನು ಶೇರ್ ಮಾಡಿದ್ದೇನೆ. ಇದರಲ್ಲಿ ತಪ್ಪು ಏನಿದೆ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ ಮಾತನಾಡಿ, ಆರೋಪಗಳಿಗೆ ತಲೆಕೆಡಿಸಿಕೊಳ್ಳಲ್ಲ. ಮನೆ ನಿರ್ಮಾಣ ನನ್ನ ಸ್ವಂತ ವಿಚಾರ. ನ್ಯಾಯ ಬದ್ಧವಾಗಿ ಮನೆ ನಿರ್ಮಾಣಕ್ಕೆ ಬೇಕಾದಂತಹ ಆದೇಶಪ್ರತಿ ತನ್ನಲ್ಲಿದೆ ಎಂದರು.
ಯುಜಿಡಿ ಯೋಜನೆಯ ಪ್ರಯೋಜನ ಪಡೆಯದ ವಾರ್ಡ್‌ಗಳ ಅನುಕೂಲಕ್ಕಾಗಿ ಕೇಂದ್ರ ಪುರಸ್ಕೃತ ಎಫ್‌ಎಸ್‌ಟಿಪಿ ಯೋಜನೆ ಮಂಜೂರುಗೊಳಿಸಿದೆ ಎಂದು ಪುರಸಭೆ ಎಂಜಿನಿಯರ್ ಗುರುಪ್ರಸಾದ್ ತಿಳಿಸಿದರು. ಯೋಜನೆಯ ಪೂರ್ಣ ಮಾಹಿತಿ ನೀಡಿದರು.
ಟ್ರಾಫಿಕ್ ಸಮಸ್ಯೆ ಬಗೆಹರಿಸುವಲ್ಲಿ ಸಹಕರಿಸದೆ ಇರುವ ಟ್ರಾಫಿಕ್ ಪೊಲೀಸ್ ಠಾಣಾಧಿಕಾರಿಗಳಿಗೆ ಹಾಗೂ ಪುರಸಭೆ ಸಾಮಾನ್ಯ ಸಭೆಗೆ ನಿಯಮಿತ ಹಾಜರಾತಿ ತೋರದ ಕಂದಾಯ ಇಲಾಖಾಧಿಕಾರಿಗಳಿಗೆ ನೋಟಿಸು ಜಾರಿಗೊಳಿಸುವಂತೆ ಪುರಸಭೆ ಅಧ್ಯಕ್ಷರ ಆದೇಶದ ಮೇರೆಗೆ ನಿರ್ಣಯಕೈಗೊಳ್ಳಲಾಯಿತು.
ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ. ಉಪಸ್ಥಿತರಿದ್ದರು.