ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಲ್ಪ ಮಾನವತ್ವವನ್ನು ವಿಶ್ವ ಮಾನವತೆಯ ಕಡೆಗೆ ಬಿತ್ತರಿಸಬೇಕು ಎಂಬ ಆಶಯದೊಂದಿಗೆ ಕಟ್ಟಿಕೊಂಡ ಶೈಕ್ಷಣಿಕ ವ್ಯವಸ್ಥೆ ನಮ್ಮದು. ಶಿಕ್ಷಣ ಸಂಸ್ಥೆಗಳು ಒಳ್ಳೆಯ ಸಂಸ್ಕಾರ ಮತ್ತು ಉತ್ತಮ ಜ್ಞಾನವನ್ನು ನಿಮಗೆ ನೀಡಿ ಬದುಕನ್ನು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಕ್ಕಿ ಆಹಾರಕ್ಕಾಗಿ ಭೂಮಿಗೆ ಬರುವಂತೆ, ನಾವು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಜನ್ಮಜಾತ ಊರಿಗೆ ಹಾಗೂ ಕಲಿತ ಶಾಲೆಗೆ ಮರಳಿ ಬರಲೇಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆತ್ತ ತಾಯಿಗೆ ನಮನ, ಹೊತ್ತ ಇಳೆಗೆ ನಮನ, ತುತ್ತಿಟ್ಟ ಬಂಧು ಬಳಗಕ್ಕೆ ನಮನ, ಶಾಲೆಗೆ ನಮನ, ತಿದ್ದಿ ತೀಡಿದ ಗುರುಗಳಿಗೆ ನಮನ ಎಂದು ಹೇಳುತ್ತಾ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಇಂದು ನೀತಿ ಇಲ್ಲದ ವ್ಯಾಪಾರ, ಶೀಲವಿಲ್ಲದ ಶಿಕ್ಷಣ, ತತ್ವರಹಿತ ರಾಜಕಾರಣ, ಮಾನವತೆ ಇಲ್ಲದ ವಿಜ್ಞಾನ ಒಂದು ರೀತಿಯಲ್ಲಿ ಎಲ್ಲವೂ ಸರಕಾಗಿಬಿಟ್ಟಿದೆ. ಮನಸು ಮಾರುಕಟ್ಟೆಯಾಗಿದೆ. ಚಿಂತೆಗಳು ಸಂತೆಯಾಗಿದೆ. ಜಗ್ಗಾಟದ ಯಾತ್ರೆಯಾಗಿದೆ. ಪಾತಕಿಗಳು ಪಾತ್ರೆಯಾಗಿದೆ. ಹೀಗೆ ಬಗೆಹರಿಯದ ಲೆಕ್ಕ ಉತ್ತರ ಸಿಗದ ಪ್ರಶ್ನೆಗಳಲ್ಲಿಯೇ ನಮ್ಮ ಬದುಕಲ್ಲಿ ಅದು ಅನಿವಾರ್ಯವಾಗಿದೆ ಎಂದು ಹೇಳಿದರು.
ಅತಿಥಿಯಾಗಿದ್ದ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಈ ಭಾಗದ ಜನತೆಗೆ ಉನ್ನತ ಶಿಕ್ಷಣ ಕನಸಾಗಿದ್ದ 1963ರ ಕಾಲಘಟ್ಟದಲ್ಲಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಇಂದು ನಾವು ನೆನಪಿಸಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲಿ ಕುರಿತು ಲಕ್ಷಾಂತರ ಜನ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆ ಎಷ್ಟೋ ಜನರು ಆಶಯಗಳು ಜೀವ ತುಂಬಿದೆ. ಅಲ್ಲದೆ ಈ ದಿನ ವಿಶೇಷ ದಿನವಾಗಿದೆ ನಾವು ಸರಿಯಾದ ಗುರಿ ಇಟ್ಟುಕೊಂಡು ಮುಂದೆ ನಡೆದರೆ ಯಶಸ್ಸು ಖಂಡಿತ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹರಿ ಛಾತ್ರ ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ, ಹಳೆ ವಿದ್ಯಾರ್ಥಿಗಳಾದ ಮಡಾಮಕ್ಕಿ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಾದ ಕಿರಣ್ ಹಟ್ಟಿಯಂಗಡಿ ಹಾಗೂ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಸಂದೇಶ ಶೆಟ್ಟಿ ಸಳ್ವಾಡಿ ಕಾರ್ಯಕ್ರಮ ನಿರೂಪಿಸಿದರು.
ಮನು ಹಂದಾಡಿ ಅವರಿಂದ ಕಾಮಿಡಿ ಟೈಮ್ ಕಾರ್ಯಕ್ರಮ, ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಸತೀಶ್ ಹೆಮ್ಮಾಡಿ ಅವರಿಂದ ಜಾದೂ ಕಾರ್ಯಕ್ರಮ ಮತ್ತು ಹಾಡುಗಾರ ತಂಡ ರಾಕೇಶ್ ದಿಲ್ಸೆ ಮತ್ತು ದೀಪ್ತಿ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.

