Kundapra.com ಕುಂದಾಪ್ರ ಡಾಟ್ ಕಾಂ

ಸಿಐಎಸ್‌ಎಫ್‌ ಯೋಧರ ಸೈಕಲ್‌ ಜಾಥಕ್ಕೆ ಕುಂದಾಪುರದಲ್ಲಿ ಭವ್ಯ ಸ್ವಾಗತ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಡ್ರಗ್ಸ್ ಜಾಗದ ಮೂಲಕ ಭಾರತದ ಪ್ರಗತಿಯನ್ನು ಕುಂದಿಸುವ ಯತ್ನ ನಡೆಯುತ್ತಲೆ ಇದೆ. ಡ್ರಗ್ಸ್ ದಂಧೆಯ ಹಿಂದೆ ಭಯೋತ್ಪಾದಕರ ಜಾಲವಿದೆ. ದೇಶದ ಯುವಜನರು ಡ್ರಗ್ಸ್ ವಿರುದ್ಧ ಹೋರಾಟ ನಡೆಸಬೇಕು. ಸಿಐಎಸ್ಎಫ್ ಡ್ರಗ್ಸ್ ಅರಿವು ಉದ್ದೇಶದಿಂದ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಏಕಕಾಲಕ್ಕೆ ಸೈಕಲ್ ಜಾಥಾ ಹಮ್ಮಿಕೊಂಡಿದೆ ಎಂದು ಸೆಂಟ್ರಲ್ ಇಂಡಸ್ಟ್ರಿಯಲ್ ಸ್ಪೆಷಲ್ ಫೋರ್ಸ್ ಗೋವಾ ವಿಭಾಗದ ಕಮಾಂಡರ್ ವಿಭು ಸಿಂಗ್ ಹೇಳಿದರು.

ಅವರು ಇಲ್ಲಿನ ಮೊಗವೀರ ಭವನದಲ್ಲಿ ಸೇನಾಭಿಮಾನಿ ಬಳಗ ಕುಂದಾಪುರದಲ್ಲಿ ಹಮ್ಮಿಕೊಂಡ ಸಿಐಎಸ್‌ಎಫ್‌ ಸೈಕಲ್ ಜಾಥಾ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮೃದ್ಧ ಭಾರತಕ್ಕಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ದೇಶದ ಪಶ್ಚಿಮ ಕರಾವಳಿಯ ಸುರಕ್ಷತೆಗೆ ಒತ್ತು ನೀಡಬೇಕಿದೆ. 125 ಮಂದಿ ಯೋಧರ ಸೈಕಲ್ ಜಾಥಾ ಮಾರ್ಚ್ 31 ರಂದು ಕನ್ಯಾಕುಮಾರಿ ತಲುಪಲಿದೆ ಎಂದರು.

ಸಿಐಎಸ್‌ಎಫ್‌ ಅಸಿಸ್ಟಂಟ್ ಕಮಾಂಡರ್ ಸಾಯಿಸಿಂಗ್ ಮಾತನಾಡಿ, ದೇಶದ ಭದ್ರತೆಯಲ್ಲಿ 5 ಬಗೆಯ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸಿಐಎಸ್‌ಎಫ್ ಕೂಡ ಒಂದು. ಸ್ಟೇಟ್ ಪೊಲೀಸರಂತೆ ಅತಿ ಹೆಚ್ಚು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಭಾಗವಿದು. ದೇಶದ ಅಮೂಲ್ಯ ಕೈಗಾರಿಕಾ ಸಂಪತ್ತು ರಕ್ಷಣೆಗಾಗಿ 1969ರಲ್ಲಿ ಹುಟ್ಟಿಕೊಂಡ ರಕ್ಷಣಾ ಸಂಸ್ಥೆ ಪ್ರಸ್ತುತ 380 ಯೂನಿಟ್ ಹೊಂದಿದೆ.

ಶಾಸಕ ಕಿರಣ್‌ ಕುಮಾರ ಕೊಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಭದ್ರತೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸಿಐಎಸ್ಎಫ್ ಯೋಧರ ಪಡೆ ಮಾದಕದ್ರವ್ಯ ಜಾಲದ ಬಗ್ಗೆ ಅರಿವು ಮೂಡಿಸಲು ಜಾಥಾ ಹಮ್ಮಿಕೊಂಡಿರುವುದು ಪ್ರಶಂಸನೀಯ. ದೇಶದ ಐಕ್ಯತೆ, ಭದ್ರತೆಗಾಗಿ ಯುವ ಸಮುದಾಯ ಡ್ರಗ್ಸ್ ವಿರುದ್ಧ ಹೋರಾಟ ನಡೆಸುತ್ತಿರುವ ಯೋಧರ ಕೈ ಬಲಪಡಿಸಬೇಕು ಎಂದರು.

ಕುಂದಾಪುರ ಸಹಾಯಕ ಕಮಿಷನರ್ ಕೆ. ಮಹೇಶ್ಚಂದ್ರ ಶುಭ ಹಾರೈಸಿದರು. ಸಿಐಎಸ್‌ಎಫ್‌ ಅಸಿಸ್ಟೆಂಟ್ ಕಮಾಂಡರ್ ರಾಮಮೂರ್ತಿ ಕುಂದಲ್, ಡಿವೈಎಸ್ಪಿ ಎಚ್. ಡಿ. ಕುಲಕರ್ಣಿ, ಪುರಸಭೆ ಅಧ್ಯಕ್ಷ ಕೆ. ಮೋಹನದಾಸ ಶೆಣೈ, ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ತಾ, ತಹಸೀಲ್ದಾ‌ರ್ ಪ್ರದೀಪ್ ಹುರ್ಡೇಕರ್, ಪುರಸಭೆ ಮುಖ್ಯಾಧಿಕಾರಿ ಆನಂದ, ಮೊಗವೀರ ಭವನ ಅಧ್ಯಕ್ಷ ಉದಯಕುಮಾರ ಹಟ್ಟಿಯಂಗಡಿ, ಸೇನಾಭಿಮಾನಿ ಬಳಗದ ಶಂಕರ ಅಂಕದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಸಿಐಎಸ್‌ಎಫ್ ವತಿಯಿಂದ ಪರಿಸರದ ನಿವೃತ್ತ ಯೋಧರನ್ನು ಗೌರವಿಸಲಾಯಿತು. ಸೇನಾಭಿಮಾನಿ ಬಳಗದ ರಾಜೇಶ್ ಕಾವೇರಿ ಸ್ವಾಗತಿಸಿದರು. ಎನ್‌ಸಿಸಿ ನೇವಿ ವಿಂಗ್‌ ವಿದ್ಯಾರ್ಥಿನಿ ಸಿಂಧು ಕಾರ್ಯಕ್ರಮ ನಿರ್ವಹಿಸಿದರು. ಪುರಸಭೆ ವ್ಯಾಪ್ತಿಯ ನಾನಾ ಕಾಲೇಜಿನ ಎನ್‌ಸಿಸಿ ಆರ್ಮಿ, ನೇವಿ ವಿಂಗ್‌ನ ವಿದ್ಯಾರ್ಥಿಗಳು ಪಾಲ್ಗೊಂಡಿದರು.

Exit mobile version