Site icon Kundapra.com ಕುಂದಾಪ್ರ ಡಾಟ್ ಕಾಂ

ನಿಷೇಧಿತ ಬೆಳಕು ಹಾಗೂ ಬುಲ್‌ ಟ್ರಾಲ್‌ ಮೀನುಗಾರಿಕೆ ಮುಂದುವರಿಸಿದರೆ ಕಾನೂನು ಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಕೇಂದ್ರ ಸರ್ಕಾರದ ಆದೇಶದನ್ವಯ  ಬೆಳಕು ಮೀನುಗಾರಿಕೆ ಹಾಗೂ ಬುಲ್‌ ಟ್ರಾಲ್‌ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್‌ ಆರ್.‌ ತಿಳಿಸಿದ್ದಾರೆ.

ನಿಷೇಧವಿದ್ದಾಗ್ಯೂ ಉಡುಪಿ ಜಿಲ್ಲೆಯಲ್ಲಿ ಬೆಳಕು ಮೀನುಗಾರಿಕೆಯಂತಹ ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಬಂಧ ಮಾನ್ಯ ಉಚ್ಚ ನ್ಯಾಯಾಲಯದಲ್ಲಿಯೂ ಸಹ ಪ್ರಕರಣಗಳು ದಾಖಲಾಗಿರುತ್ತದೆ. ನ್ಯಾಯಾಲಯದಿಂದ ಈ ಸಂಬಂಧ ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ನಿರ್ದೇಶನವಿರುತ್ತದೆ.

ಆದ್ದರಿಂದ ಮಾನ್ಯ ನ್ಯಾಯಾಲಯದ ಹಾಗೂ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಬೆಳಕು ಮೀನುಗಾರಿಕೆಯಲ್ಲಿ / ಬುಲ್‌ ಟ್ರಾಲ್‌ ಮೀನುಗಾರಿಕೆಯಲ್ಲಿ ತೊಡಗುವ ದೋಣಿಗಳ ಮೀನುಗಾರಿಕೆ ಪರವಾನಿಗೆ ಹಾಗೂ ದೋಣಿ ನೋಂದಣಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ, ಅಂತಹ ದೋಣಿಗಳಿಗೆ ಡೀಸೆಲ್‌ ವಿತರಣೆಯನ್ನು ನಿಲ್ಲಿಸಲಾಗುವುದು. ಇಂತಹ ಪ್ರಕರಣಗಳು ಪುನರಾವರ್ತಿಸಿದ್ದಲ್ಲಿ ಶಾಶ್ವತವಾಗಿ ಅಂತಹ ದೋಣಿಗಳ ನೋಂದಣಿಯನ್ನು ರದ್ದುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕಾ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

Exit mobile version