Site icon Kundapra.com ಕುಂದಾಪ್ರ ಡಾಟ್ ಕಾಂ

ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುನರ್ ಅಷ್ಟಬಂಧ, ಬ್ರಹ್ಮಕಲಶೋತ್ಸವ ಸಂಪನ್ನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಸೇನಾಪುರ ಗ್ರಾಮದ ಪುರಾಣ ಪ್ರಸಿದ್ಧ ನಾಗಕ್ಷೇತ್ರವಾದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುನರ್ ಅಷ್ಟಬಂಧ ಮತ್ತು ಬ್ರಹ್ಮಕಲಶೋತ್ಸವ ಶುಕ್ರವಾರದಿಂದ ಆದಿತ್ಯವಾರದ ತನಕ ವಿಜೃಂಭಣೆಯಿಂದ ನಡೆಯಿತು.

ಶುಕ್ರವಾರ ಸಂಜೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತ್ತು. ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸ್ಥಾನಶುದ್ಧಿ, ಪ್ರಾಸಾದಶುದ್ಧಿ, ರಾಕೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ಬಲಿಪೂಜೆ ನಡೆಯಿತು.

ಶನಿವಾರ ಬೆಳಿಗ್ಗೆ ಪುಣ್ಯಾಹ, ಗಣಯಾಗ, ಶಾಂತಿಹೋಮ, ಕಲಾಭಿವೃದ್ಧಿ, ತತ್ವಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಂಡಲ ರಚನೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಅದೇ ದಿನ ಸಂಜೆ ಪುಣ್ಯಾಹ, ಮಂಟಪ ಸಂಸ್ಕಾರ, ಬ್ರಹ್ಮಕಲಶ ಸ್ಥಾಪನೆ, ಮಹಾಪೂಜೆ ನಡೆಯಿತು. ಸಂಜೆ 5 ಗಂಟೆಯಿಂದ ಸಂಜೆ 7 ಗಂಟೆಯ ತನಕ ಆಹ್ವಾನಿತ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ಆದಿತ್ಯವಾರ ಪುಣ್ಯಾಹ, ಜೀರ್ಣಅಷ್ಟಬಂಧ ಲೇಪನ ಪ್ರಧಾನ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಸಂದರ್ಶನ ಸೇವೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಶ್ರೀ ಕ್ಷೇತ್ರ ಗುಡ್ಡಮ್ಮಾಡಿ ಇದರ ಅನುವಂಶಿಕ ಮೊತ್ತೇಸರರಾದ ಬಿ. ಅರುಣ ಕುಮಾರ ಶೆಟ್ಟಿ, ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಅಭಿನಂದನ ಎ. ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷರಾದ ವೆಂಕಟೇಶ ಮಂಜರು ಉಪಸ್ಥಿತರಿದ್ದರು.

Exit mobile version