Kundapra.com ಕುಂದಾಪ್ರ ಡಾಟ್ ಕಾಂ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ: ಎಲ್ಲಾ 13 ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರಕಾರ ಒಪ್ಪಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ:
ಕರಾವಳಿಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿದೆ ಎನ್ನಲಾದ 14ರಿಂದ 20 ಕೋಟಿ ರೂ. ಅವ್ಯವಹಾರ ಪ್ರಕರಣದ ಸಮಗ್ರ ತನಿಖೆಯೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಕಳೆದ 48 ದಿನಗಳಿಂದ ಕಾರ್ಖಾನೆ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ನಾಳೆ ಹಿಂದೆಗೆದುಕೊಳ್ಳಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ.

ಧರಣಿ ಸ್ಥಳಕ್ಕೆ ಬುಧವಾರ ಸಂಜೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ಧರಣಿ ನಿರತರ ಎಲ್ಲಾ ಬೇಡಿಕೆಗಳನ್ನು ಸರಕಾರ ಒಪ್ಪಿಕೊಂಡಿರುವುದಾಗಿ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ತಿಳಿಸಿದ್ದು, ಧರಣಿಯನ್ನು ಹಿಂದೆಗೆದುಕೊಳ್ಳುವಂತೆ ಮನವಿ ಮಾಡಿದ್ದರು ಎಂದು ಅವರು ವಿವರಿಸಿದರು.

ಪ್ರಕರಣದಲ್ಲಿ ಶಾಮೀಲಾಗಿರುವ ಮೂವರು ಹಿರಿಯ ಸಹಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲಾ 13 ಮಂದಿ ಆಪಾದಿತರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರಕಾರ ಒಪ್ಪಿಗೆ ನೀಡಿದೆ. ಇದರಿಂದ ಎಲ್ಲಾ ಆಪಾದಿ ತರ ವಿರುದ್ಧವೂ ನ್ಯಾಯಾಲಯದ ವಿಚಾರಣೆಗೆ ಸರಕಾರದ ಅನುಮತಿ ಸಿಕ್ಕಂತಾಗಿದೆ. ಅಲ್ಲದೇ ವಿಶೇಷ ಪ್ರಾಸಿಕ್ಯೂಟರ್ ನೇಮಕದ ಬೇಡಿಕೆಯನ್ನೂ ಸರಕಾರ ಮಾನ್ಯ ಮಾಡಿದ್ದು, ಶಿವಪ್ರಸಾದ್ ಆಳ್ವ ಅವರನ್ನು ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿದೆ. ಈ ಮೂಲಕ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಬಹುಕೋಟಿ ವಂಚನೆಯ ವಿರುದ್ಧ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆದಿರುವ ಜಿಲ್ಲೆಯ ರೈತರ ಹೋರಾಟಕ್ಕೆ ಮೊದಲ ಹಂತದ ಜಯ ದೊರೆತಂತಾಗಿದೆ ಎಂದು ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 3:30ಕ್ಕೆ ಧರಣಿ ಚಪ್ಪರದಲ್ಲಿ ಹೋರಾಟದಲ್ಲಿ ಪಾಲ್ಗೊಂಡವರಿಗೆ ಕೃತಜ್ಞತಾ ಸಭೆಯೊಂದಿಗೆ ಕಳೆದ 49 ದಿನಗಳ ಕಾಲ ನಿರಂತರವಾಗಿ ಹಗಲು-ರಾತ್ರಿ ನಡೆದ ಧರಣಿ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ.

ಈ ವೇಳೆ ಹೋರಾಟದಲ್ಲಿ ಪಾಲ್ಗೊಂಡ ಕರ್ನಾಟಕ ಪ್ರಾಂತ ರೈತ ಸಂಘವೂ ಸೇರಿದಂತೆ ಜಿಲ್ಲೆಯ ವಿವಿಧ ರೈತ ಸಂಘಟನೆಗಳು, ಸಹಕಾರಿ ಸೊಸೈಟಿಗಳ ಪದಾಧಿಕಾರಿಗಳು, ಸಾವಿರಾರು ಮಂದಿ ರೈತರು, ಜನಸಾಮಾನ್ಯರು ಸರದಿಯ ಮೇಲೆ 24 ತಾಸುಗಳ ಕಾಲ ಹೋರಾಟದಲ್ಲಿ ಪಾಲ್ಗೊಂಡು, ಜಿಲ್ಲೆಯಲ್ಲಿ ನ್ಯಾಯಕ್ಕಾಗಿ, ಭ್ರಷ್ಟಾಚಾರದ ವಿರುದ್ಧ ನಡೆದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.

Exit mobile version