Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್: ಅಖಿಲ ಭಾರತ ಅಂತರ ವಿವಿ ಪುರುಷರ ಖೋ ಖೋ ಪಂದ್ಯಾಟ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಮಂಗಳೂರು ವಿಶ್ವವಿದ್ಯಾಲಯ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಖೋ-ಖೋ ಚಾಂಪಿಯನ್ಶಿಪ್‌ನ ಫೈನಲ್ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮುಂಬೈ ವಿಶ್ವವಿದ್ಯಾನಿಲಯದ ವಿರುದ್ಧ 11-10 ಅಂಕಗಳು ಹಾಗೂ 5 ನಿಮಿ?ಗಳ ಅಂತರದಿಂದ  ಗೆದ್ದು  ಎರಡನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು.

ಮಂಗಳೂರು ವಿವಿ ಪ್ರತಿನಿಧಿಸಿದ ತಂಡದ ಒಟ್ಟು 15 ಆಟಗಾರರಲ್ಲಿ 13 ಆಟಗಾರರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.  ಅಂಗಣದಲ್ಲಿ  ಆಡಿದ 9 ಜನ ಆಟಗಾರರಲ್ಲಿ ಎಲ್ಲಾ ಆಟಗಾರರು ಆಳ್ವಾಸ್ ವಿದ್ಯಾರ್ಥಿಗಳಾಗಿದ್ದರು ಎಂಬುದು ಗಮನಾರ್ಹ ಅಂಶ.

ಮೊದಲಿಗೆ ನಡೆದ ಲೀಗ್ ಪಂದ್ಯಾಟದಲ್ಲಿ ದೆಹಲಿ ವಿಶ್ವವಿದ್ಯಾನಿಲಯ, ಹೇಮಚಂದ್ ವಿಶ್ವವಿದ್ಯಾನಿಲಯ ಹಾಗೂ ಸಾವಿತ್ರಿ ಬಾಯಿ ಪುಲೇ ವಿಶ್ವವಿದ್ಯಾನಿಲಯದೊಂದಿಗೆ ಜಯಗಳಿಸಿ ಕ್ವಾಟರ್ ಫೈನಲ್ ಹಂತಕ್ಕೆ ಅರ್ಹತೆಯನ್ನುಗಳಿಸಿತ್ತು.  ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ವಿಶ್ವವಿದ್ಯಾನಿಲಯದ ವಿರುದ್ಧ ಜಯಗಳಿಸಿ ಸೆಮಿಫೈನಲ್ ಪಂದ್ಯಕ್ಕೆ ಅರ್ಹತೆಯನ್ನು ಪಡೆಯಿತು.  ನಂದೆಡ್‌ನ ಎಸ್‌ಆರ್‌ಟಿಎಂಯುನ  ತಂಡವನ್ನು ಮಣಿಸಿ ಫೈನಲ್ ಪಂದ್ಯಕ್ಕೆ ತೇರ್ಗಡೆ ಹೊಂದಿ, ಫೈನಲ್ ಪಂದ್ಯದಲ್ಲಿ ಮುಂಬೈ ವಿಶ್ವವಿದ್ಯಾನಿಲಯವನ್ನು ಮಣಿಸುವುದರ ಮೂಲಕ ಅಖಿಲ ಭಾರತ  ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಖೋ-ಖೋ ಚಾಂಪಿಯನ್ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಚಾಂಪಿಯನ್ ಪಟ್ಟ ಅಲಂಕರಿಸಿತು.

ಕಳೆದ ಡಿಸೆಂಬರ್ 27 ರಿಂದ 31ರವರೆಗೆ ತಮಿಳುನಾಡಿನ ತಿರುವನೂರಿನ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾನಿಲಯ ಪಡೆದು ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪಂದ್ಯಾಟಕ್ಕೆ ಅರ್ಹತೆಯನ್ನು ಪಡೆದಿತ್ತು.  

ವೈಯಕ್ತಿಕ ವಿಭಾಗದಲ್ಲಿ  ಮಂಗಳೂರು ವಿವಿ ಪ್ರತಿನಿಧಿಸಿದ್ದ ಆಳ್ವಾಸ್‌ನ ವಿದ್ಯಾರ್ಥಿ ದೀಕ್ಷಿತ್  ಅತ್ಯುತ್ತಮ ಆಕ್ರಮಣಕಾರ ಪ್ರಶಸ್ತಿ ಪಡೆದರೆ,  ಆಳ್ವಾಸ್‌ನ ನಿಖಿಲ್ ಅತ್ಯುತ್ತಮ ರಕ್ಷಕ ಪ್ರಶಸ್ತಿಗೆ ಭಾಜನರಾದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಅಖಿಲ ಭಾರತ ಅಂತರ್ ವಿವಿಯ ವಿವಿಧ ಕ್ರೀಡಾಕೂಟದ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಸಾಧನೆ ಮೆರೆದಿದ್ದು, ಅಂತರ್ ವಿವಿ ಪುರುಷರ ಹಾಗೂ ಮಹಿಳೆಯರ ಅಥ್ಲೇಟಿಕ್ಸ್‌ನಲ್ಲಿ 8 ಬಾರಿ ಚಾಂಪಿಯನ್ಸ್ ಆಗಿದ್ದರೆ, ರಾಷ್ಟ್ರೀಯ ಮಟ್ಟದ ಕ್ರಾಸಕಂಟ್ರಿಯಲ್ಲಿ ನಾಲ್ಕು ಬಾರಿ, ಬಾಲ್‌ಬ್ಯಾಡ್‌ಮಿಂಟನ್‌ನಲ್ಲಿ ಸತತ 8 ಬಾರಿ, ಖೋಖೋದಲ್ಲಿ ಎರಡು ಬಾರಿ,  ಕಬ್ಬಡ್ಡಿಯಲ್ಲಿ ಒಂದು ಬಾರಿ, ವೇಯ್ಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಹಾಗೂ ದೇಹದಾಡ್ಯ ಸ್ಪರ್ಧೆಯಲ್ಲಿ ಪದಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ.  ಈ ಶೈಕ್ಷಣಿಕ ಸಾಲಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 223 ಕ್ಕೂ ಅಧಿಕ ವಿದ್ಯಾರ್ಥಿಗಳು ಅಖಿಲ ಭಾರತ ಅಂತರ್ ವಿವಿಯ ವಿವಿಧ ಸ್ಪರ್ಧೆಗಳಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿ ಪದಕ ಪಡೆದ ಹಿರಿಮೆಗೆ ಪಾತ್ರರಾಗಿದ್ದಾರೆ. 

ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Exit mobile version