Kundapra.com ಕುಂದಾಪ್ರ ಡಾಟ್ ಕಾಂ

ಮೇ.10ಕ್ಕೆ ಬೈಂದೂರಿನಲ್ಲಿ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಬೈಂದೂರು ಭಾಗದಲ್ಲಿ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಸಿದ್ಧ ಸಮಾಧಿ ಯೋಗ ಬೈಂದೂರು ವಲಯದ ಮೂಲಕ  ಪಾದಯಾತ್ರೆ  ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಇದೀಗ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿರುವುದು ಸಂತಸದ ವಿಚಾರವಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಹಾರೈಸುವುದಾಗಿ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಹೇಳಿದರು.

ಸಿದ್ಧ ಸಮಾದಿ ಯೋಗ ಬೈಂದೂರು ವಲಯದ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜಗದೊಡೆಯ ಶ್ರೀ ಶ್ರೀನಿವಾಸ ಮತ್ತು ಶ್ರೀ ಪದ್ಮಾವತಿಯವರ ಸಾರ್ವಜನಿಕ ವೈಭವದ ಕಲ್ಯಾಣೋತ್ಸವವು ಮೇ.10 ರಂದು ಇಲ್ಲಿನ ಯಡ್ತರೆ ಗ್ರಾಮದ ನೆಲ್ಯಾಡಿ ಬೈಲಿನಲ್ಲಿ ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಿದ್ಧ ಸಮಾದಿ ಯೋಗದ ಆರ್ಚಾರ್ಯ ಕೇಶವಜೀ ಮಾತನಾಡಿ, ಮೇ.10ರಂದು ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು ಅಂದು ಬೆಳ್ಳಿಗೆ 8.00 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಳಿಕ 9.30ರಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕಲ್ಯಾಣೋತ್ಸವ ನಡೆಯುವ ಸ್ಥಳಕ್ಕೆ ಪುರಮೆರವಣೆಗೆ ಮೂಖಾಂತರ ಶ್ರೀ ಶ್ರೀನಿವಾಸ ದೇವರ ಆಗಮನವಾಗಲಿದೆ. ಬಳಿಕ ಕೋಟಿ ಗೋವಿಂದ ನಾಮ ಜಪಯಜ್ಞ, ವಿವಿಧ ಹೋಮಹವನಗಳು ಜರುಗಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಮಹಾ ಅನ್ನಸಂತರ್ಪಣೆ ಜರುಗಲಿದೆ.

ಮಧ್ಯಾಹ್ನ ಸ್ಥಳೀಯ ಭಜನಾ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 5.30ರಿಂದ ಶ್ರೀ ಶ್ರೀನಿವಾಸ ಮತ್ತು ಪದ್ಮಾವತಿ ಕಲ್ಯಾಣೋತ್ಸವ ಜರುಗಲಿದೆ. ಶೃಂಗೇರಿ ಶ್ರೀ ಶಾರದ ಪೀಠದ ಶ್ರೀ ಭಾರತೀ ತಿರ್ಥಮಹಾಸ್ವಾಮೀಗಳು ಆಗಮಿಸಲಿದ್ದಾರೆ. ಬೆಂಗಳೂರು ಶ್ರೀವಾರಿ ಫೌಂಡೇಶನ್‌ನ ಎನ್.‌ ವೇಂಕಟೇಶ್ವರ ಮೂರ್ತಿ ಇವರ ಪೌರೋಹಿತ್ವದಲ್ಲಿ, ವೇದಮೂರ್ತಿ ಬಿ. ಲೋಕೇಶ್‌ ಅಡಿಗ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.

ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷರಾದ ದಿವಾಕರ್‌ ಶೆಟ್ಟಿ ನೆಲ್ಯಾಡಿ ಮಾತನಾಡಿ, ಲೋಕ ಕಲ್ಯಾಣರ್ಥವಾಗಿ ಆಚಾರ್ಯ ಶ್ರೀ ಕೇಶವ ಬೆಳ್ಳಿಯವರ ಸಂಕಲ್ಪ ಮತ್ತು ನೇತೃತ್ವದಲ್ಲಿ ಜಗದೊಡೆಯ ಶ್ರೀ ಶ್ರೀನಿವಾಸ ಮತ್ತು ಶ್ರೀ ಪದ್ಮಾವತಿಯವರ ಸಾರ್ವಜನಿಕ  ವೈಭವದ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದು ಸರ್ವ ರೀತಿಯಲ್ಲಿ ತಯಾರಿ ನಡೆಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರುವುದಾಗಿ ತಿಳಿಸಿದರು.

ಈ ವೇಳೆ ಕಾರ್ಯದರ್ಶಿ ಸುಂದರ ಕೊಠಾರಿ ಸ್ವಾಗತ ಸಮಿತಿಯ ಪುಷ್ಪರಾಜ್‌ ಶೆಟ್ಟಿ ಕೃಷ್ಣ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

Exit mobile version