Kundapra.com ಕುಂದಾಪ್ರ ಡಾಟ್ ಕಾಂ

ದೇಶದ ಜಾತಿ ವ್ಯವಸ್ಥೆ ಸಾಮರಸ್ಯಕ್ಕೆ ಮಾರಕ: ಕುಂ. ವೀರಭದ್ರಪ್ಪ

ಮೂಡುಬಿದಿರೆ: ಆಂತರಿಕ ಪ್ರಜಾಪ್ರಭುತ್ವವಿಲ್ಲದಿರುವಾಗ ರಾಕ್ಷಸ ಪ್ರವೃತ್ತಿಗಳು ಜಾಗೃತಗೊಳ್ಳುತ್ತದೆ. ಭಾರತದಲ್ಲಿ ಕಳೆದ ಎಂಟು ತಿಂಗಳಿನಲ್ಲಿ 600ಕ್ಕೂ ಹೆಚ್ಚು ಕೋಮುಗಲಭೆಗಳು ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಸನಾತನ ಮೌಲಗಳನ್ನು ಸಮಾಜದಲ್ಲಿ ಬಲವಂತವಾಗಿ ತುಂಬುವ ಕೆಲಸವಾಗುತ್ತಿದೆ. ಸಾಮರಸ್ಯಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸುವುದು. ಸಮಾಜ ರೋಗಕ್ಕೆ ತುತ್ತಾದಾಗ ಚಿಕಿತ್ಸೆ ನೀಡುವ ಜವಾಬ್ದಾರಿ ನಮ್ಮದೂ ಆಗಿದೆ. ನಮಗೆ ಸಂವಿಧಾನಕ್ಕಿಂತ ಮಿಗಿಲಾದ ಗ್ರಂಥವಿಲ್ಲ. ಇದಕ್ಕೆ ಧಕ್ಕೆ ಬರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಸಾಮರಸ್ಯ ಹೊಸತನದ ಹುಡುಕಾಟ ಎಂಬ ವಿಚಾರವಾಗಿ ವಿಶೇಷೋಪನ್ಯಾಸ ನೀಡಿದರು. ಸಾಮರಸ್ಯಕ್ಕೆ ದೊಡ್ಡ ಪೆಟ್ಟು ಜಾತಿ ವ್ಯವಸ್ಥೆ. ಜಾತಿಯಿಂದಾಗಿ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾನೆ. ದೇಶ ಅಸಹಿಷ್ಣುತೆಯಿಂದ ಮುಕ್ತವಾಗಬೇಕೆಂದಿದ್ದರೇ ಮೊದಲು ಜಾತಿವ್ಯವಸ್ಥೆ ಕೊನೆಗೊಳ್ಳಬೇಕು. ವಾಸ್ತು ಹಾಗೂ ಜೋತಿಷಿಗಳ ರೂಪದಲ್ಲಿ ಮತ್ತೆ ಸಮಾಜದಲ್ಲಿ ತಲೆಯೆತ್ತುತ್ತಿರುವ ವೈದಿಕ ಧರ್ಮ ಸಮಾಜವನ್ನು ನಿಯಂತ್ರಿಸಿ, ದಿನಚರಿಯಲ್ಲಿ ಏರುಪೇರು ಮಾಡುವ ಕೆಲಸ ಮಾಡುತ್ತಿದೆ. ಇಂತಹ ಶಕ್ತಿಗಳು ಭಯೋತ್ಪಾದನೆಗಿಂತ ಭಯಾನಕವಾದುದು ಎಂದರು.

ದೇಶ ಬಿಡುವುದ ಸರಿಯಲ್ಲ.
ಭಾರತದಂತಹ ವೈಶಿಷ್ಟ್ಯಪೂರ್ಣ ದೇಶ ಇನ್ನೊಂದಿಲ್ಲ. ದೇಶ ಬಿಟ್ಟುಹೋಗುತ್ತೆನೆಂಬ ಮಾತನ್ನು ಯಾರೂ ಯಾವ ಸಂದರ್ಭದಲ್ಲಿಯೂ ಹೇಳಬಾರದು. ಸಹಿಷ್ಟುತೆ ಹಾಗೂ ಅಸಹಿಷ್ಟುತೆ ಒಂದಕ್ಕೊಂದು ಪೂರಕವಾದವುಗಳು. ಒಂದು ಕೆರಳಿದಾಗ ಮತ್ತೊಂದು ಅದನ್ನು ರಿಪೇರಿ ಮಾಡುವ ಶಕ್ತಿ ಭಾರತದಂತಹ ದೇಶಗಳಿಗೆ ಮಾತ್ರವೇ ಇದೆ. ಸಮಾಜವನ್ನು ಅರ್ಥಪೂರ್ಣವಾಗಿ ನಿರ್ಮಿಸುವ ಕೆಲಸ ಮಾಡುವ ಎಂದವರು ಹೇಳಿದರು.

Exit mobile version