ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕರಿಗಾಗಿ ಭಾಷಾ ಕೌಶಲ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾಲ್ಕು ದಿನಗಳ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರವು ಅನುಭವಿ ಶಿಕ್ಷಣ ತಜ್ಞೆ ಹಾಗೂ ಯೋಗ ಥೆರಪಿಸ್ಟ್ ಆಗಿರುವ ಜಯಶ್ರೀ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರದ ಮುಖ್ಯ ಉದ್ದೇಶವು ಶಿಕ್ಷಕರಲ್ಲಿ ಸಮರ್ಥ ಸಂವಹನ ಕೌಶಲ್ಯವನ್ನು ಬೆಳೆಸುವುದು ಹಾಗೂ ಒತ್ತಡ ರಹಿತ ದಿನಚರಿಯನ್ನು ಅನುಸರಿಸುತ್ತಾ, ಉತ್ತಮ ಶಿಕ್ಷಕರಾಗಿ ಹೊಮ್ಮಲು ಸಹಕರಿಸುವುದಾಗಿತ್ತು. ಶೈಕ್ಷಣಿಕ ವಾತಾವರಣದಲ್ಲಿ ಭಾಷೆಯ ಪ್ರಾಮುಖ್ಯತೆ ಹಾಗೂ ಶಿಕ್ಷಕರ ಪಾತ್ರ ಎಷ್ಟು ಮಹತ್ವಪೂರ್ಣ ಎಂಬುದನ್ನು ಸುಂದರವಾಗಿ ಇಲ್ಲಿ ವಿವರಿಸಲಾಯಿತು.
ಜಯಶ್ರೀ ಅವರು ವ್ಯಕ್ತಿತ್ವ ವಿಕಸನ ಹಾಗೂ ಸಮರ್ಥ ಅಭಿವ್ಯಕ್ತಿಯ ತಂತ್ರಗಳ ಮೇಲೆ ಪ್ರಾಯೋಗಿಕ ತರಬೇತಿ ನೀಡಿದರು. ಚಟುವಟಿಕೆ ಆಧಾರಿತ ವಿಧಾನಗಳ ಮೂಲಕ ಈ ಕೌಶಲ್ಯವನ್ನು ಬಳಕೆ ಮಾಡುವ ಬಗ್ಗೆ ಸ್ಪಷ್ಟತೆ ನೀಡಲಾಯಿತು. ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯವನ್ನು ನವೀಕರಿಸಿಕೊಂಡರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅವರು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ,“ ಜಯಶ್ರೀ ಅವರ ಕಾರ್ಯಾಗಾರವು ನಮ್ಮ ಶಿಕ್ಷಕರ ಭಾಷಾ ಕೌಶಲ್ಯವನ್ನು ವೃದ್ಧಿಸುವಲ್ಲಿ ತುಂಬಾ ಉಪಯುಕ್ತವಾಗಲಿದ್ದು, ಬೋಧನೆಯಲ್ಲಿ ಸೃಜನಾತ್ಮಕತೆಯನ್ನು ಅಳವಡಿಸಿಕೊಳ್ಳಲು ಸಹಾಯಕವಾಗಲಿದೆ” ಎನ್ನುತ್ತಾ, ಶಿಕ್ಷಕರು ಹೆಚ್ಚಿನ ಆತ್ಮವಿಶ್ವಾಸ ಹೊಂದಿರುವುದರ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಸುಜಾತಾ ಸದಾರಾಮ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಜಯಶ್ರೀ ಅವರ ತರಬೇತಿಯ ಶೈಲಿಯನ್ನು ಶ್ಲಾಘಿಸಿದರು. ಹಲವು ಶಿಕ್ಷಕಿಯರು ಕಾರ್ಯಾಗಾರದ ಕುರಿತಾಗಿ ತಮ್ಮ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಶಾಲಾ ಆಡಳಿತಾಧಿಕಾರಿಯವರಾದ ವೀಣಾ ರಶ್ಮಿ ಎಂ. ಅವರು ಉಪಸ್ಥಿತರಿದ್ದರು.

