Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಕಾಲೇಜು: ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ

ಕುಂದಾಪ್ರ ಡಾಟ್‌ ಕಾಂ ಸುದ್ದಿ
ಕುಂದಾಪುರ: ಇಲ್ಲಿನ
ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2ರ ಆಶ್ರಯದಲ್ಲಿ ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸವನ್ನು ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಕುಂದಾಪುರದ ವಕೀಲರಾದ ಪ್ರದೀಪ್ ಕುಮಾರ್ ಶೆಟ್ಟಿ ಕಾಳಾವರ ಅವರು ಮಾತನಾಡಿ, ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡನೇ ಮಹಾಯುದ್ಧದ ನಂತರ ಹತ್ಯೆ ಮತ್ತು ದೌರ್ಜನ್ಯಗಳಿಗೆ ಪ್ರತಿಕ್ರಿಯೆಯಾಗಿ ಆಧುನಿಕ ಪ್ರಪಂಚದಲ್ಲಿ ಮಾನವ ಹಕ್ಕುಗಳು ಹೊಸ ರೂಪುರೇಷೆ ಪಡೆದುಕೊಂಡವು. ಸಾರ್ವತ್ರಿಕವಾಗಿ ಜಾಗತಿಕ ಮನ್ನಣೆ ಪಡೆದ ಈ ಹಕ್ಕುಗಳು ಎಲ್ಲಾ ಮಾನವರ ಘನತೆಯನ್ನು ಗುರುತಿಸುವ ಮತ್ತು ರಕ್ಷಿಸುವ ಮಾನದಂಡಗಳಾಗಿವೆ.

ಸಮಾನತೆಯ ಬದುಕುವ ಹಕ್ಕಿನ ಸಂದರ್ಭದಲ್ಲಿ ಸಂವಿಧಾನಾತ್ಮಕವಾಗಿ ಬಂದ ಮೂಲಭೂತ ಹಕ್ಕುಗಳು ಅಷ್ಟೇ ಪ್ರಾಮುಖ್ಯತೆ ಪಡೆಯುತ್ತವೆ. ಹಕ್ಕುಗಳೊಂದಿಗೆ ಕರ್ತವ್ಯಗಳ ಕುರಿತು ಸಹ ವಿದ್ಯಾರ್ಥಿಗಳು ಚಿಂತಿಸಬೇಕು ಎಂದರು. ಇದೇ ಸಂದರ್ಭ ರಸ್ತೆ ಸುರಕ್ಷತಾ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ದೀಪ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಮಾನವ ಹಕ್ಕು ಘಟಕದ ಸಂಯೋಜಕ ಸುಧೀರ್ ಕುಮಾರ್ ವಂದಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಐಶ್ವರ್ಯ ಡಿ. ರಾವ್ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಪ್ರಾರ್ಥಿಸಿದರು.

Exit mobile version