Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 106ನೇ ತಿಂಗಳ ಕಾರ್ಯಕ್ರಮ

??????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಪ್ರತಿಭೆ ನಿಮ್ಮದು ವೇದಿಕೆ ನಮ್ಮದು 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸತತ 106ನೇ ತಿಂಗಳ ಕಾರ್ಯಕ್ರಮವು ಇತ್ತೀಚಿಗೆ ದೇವಕಿ ಸುರೇಶ್ ಪ್ರಭು ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಪ್ಪಿನಕುದ್ರಿನಂತಹ ಸಣ್ಣ ಹಳ್ಳಿಯಲ್ಲಿ ಇಂತಹ ಭವ್ಯ ವೇದಿಕೆಯನ್ನು ಡಾ. ಸುಧಾ ಮೂರ್ತಿ ಹಾಗೂ ಡಾ. ಪಿ, ದಯಾನಂದ ಪೈ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಂದು ಕಲೆಯ ಕಲಾವಿದನಿಗೆ ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಗೊಂಬೆಯಾಟ ಅಕಾಡೆಮಿ ಅವಕಾಶ ನೀಡುತ್ತಿದೆ. ಆ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳುವಳಿಕೆ ನೀಡಿದರು.

ವೇದಿಕೆಯಲ್ಲಿ ಗೊಂಬೆಯಾಟದ ಹಿರಿಯ ಸೂತ್ರಧಾರಿ ವೆಂಕಟರಮಣ ಬಿಡುವಾಳ್, ಅನಸೂಯಾ ವಿ. ಬಿಡುವಾಳ್, ಯಶೋದಾ ಜೆ. ಪೂಜಾರಿ, ನರಸಿಂಹ ಪೂಜಾರಿ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು. 

ಬಿಡುವಾಳ್ ಪ್ರತಿಷ್ಠಾನ, ಹೇರೂರು ಇದರ ಅಧ್ಯಕ್ಷರಾದ ವೆಂಕಟರಮಣ ಬಿಡುವಾಳ್ ದಂಪತಿಗಳನ್ನು ಹಾಗೂ ಅತ್ಯಂತ ಕಿರಿಯ ಪ್ರತಿಭೆ ವೈಭವ್ ಜೆ. ಪೂಜಾರಿ, ಉಪ್ಪಿನಕುದ್ರು ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ನಂತರ  ಬಿಡುವಾಳ್ ಪ್ರತಿಷ್ಠಾನ ಹೇರೂರು ಇದರ ಬಾಲ ಪ್ರತಿಭೆಗಳಾದ ಅನೂಷಾ ಬಿಡುವಾಳ್, ಅಕ್ಷತಾ ಬಿಡುವಾಳ್, ಪ್ರೀತಿ ಅಡಿಗ, ವೈಷ್ಣವಿ ಬಿಡುವಾಳ್, ಶಾಂಭವಿ ಅಡಿಗ ಮತ್ತು ಪ್ರಣತಿ ಬಿಡುವಾಳ್ ಅವರು ನಡೆಸಿಕೊಟ್ಟ ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ಉಪ್ಪಿನಕುದ್ರು ವೈಭವ್ ಜೆ. ಪೂಜಾರಿ ಅವರ ನೃತ್ಯ ನೆರೆದ ಪ್ರೇಕ್ಷಕರನ್ನು ರಂಜಿಸಿತು.

ನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ಶ್ಯಾನುಭಾಗ್ ಬಂಟ್ವಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.

Exit mobile version