Kundapra.com ಕುಂದಾಪ್ರ ಡಾಟ್ ಕಾಂ

ನುಡಿಸಿರಿಗೆ ಪಂಥದ ಮಿತಿಯಿಲ್ಲ. ಜನರ ಸಾರ್ಥಕ ಭಾವವೇ ನಮ್ಮ ಯಶಸ್ಸು: ಡಾ. ಆಳ್ವ

ಮೂಡುಬಿದಿರೆ: ನುಡಿಸಿರಿಯ ಆಶಯಗಳನ್ನು ಬಲಪಂಥೀಯ ಅಥವಾ ಎಡಪಂಥೀಯ ಎಂಬ ಧೊರಣೆಗೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲರ ವಿಚಾರಗಳಿಗೂ ಇಲ್ಲಿ ವೇದಿಕೆ ಮಾಡಿಕೊಡಲಾಗಿದೆ. ನುಡಿಸಿರಿಯ ಅಧ್ಯಕ್ಷತೆ ವಹಿಸಿದವರು ಒಂದಿಲ್ಲೊಂದು ಪಂಥದಲ್ಲಿ ಗುರುತಿಸಿಕೊಂಡಿದ್ದರು. ಅವರ ಆಯ್ಕೆ ವಿಚಾರದಲ್ಲಿ ನಾವೆಂದೂ ಭೇದ ಮಾಡಿಲ್ಲ. ಯಾರ ವಿಚಾರಧಾರೆಗೂ ತಡೆಯೊಡ್ಡಿಲ್ಲ. ಇದು ನಮ್ಮೇಲ್ಲರ ಸಮ್ಮೇಳನವಾಗಬೇಕೆಂಬುದೇ ನಮ್ಮ ಆಶಯ ಎಂದು ಆಳ್ವಾಸ್ ನುಡಿಸಿರಿಯ ರೂವಾರಿ ಡಾ. ಎಂ. ಮೋಹನ ಆಳ್ವ ಹೇಳಿದರು.

ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾನು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆಂಬ ಕಾರಣಕ್ಕೆ ನುಡಿಸಿರಿಯನ್ನು ವಿರೋಧಿಸುವುದು ಸರಿಯಲ್ಲ. ತನಗೆ ಧರ್ಮದ ಮೇಲಿರುವ ಅಪಾರ ಗೌರವ ಹಾಗೂ ವಿಶ್ವ ಹಿಂದೂ ಪರಿಷತ್ ನಾಯಕರು ಕೇಳಿಕೊಂಡಿದ್ದರಿಂದ ಆ ಸ್ಥಾನವನ್ನು ಸ್ವೀಕರಿಸಿದ್ದೇನೆ ಆದರೆ ತಾನೆಂದೂ ಕೋಮುವಾದ ಮಾಡಿಲ್ಲ. ಸಮಾಜ ಒಡೆಯುವ ಕೆಲಸ ಮಾಡಿದ ಬಗ್ಗೆ ನಿದರ್ಶನಗಳಿಲ್ಲ. ಮುಸಲ್ಮಾನರು ಹಾಗೂ ಕ್ರೈಸ್ತರೊಂದಿಗೆ ಅನ್ಯೂನ್ಯವಾದ ಬದುಕು ಕಟ್ಟಿಕೊಂಡದ್ದೇನೆ. ಸಾವಿರಾರು ಮುಸಲ್ಮಾನ, ಕ್ರೈಸ್ತ ಮಕ್ಕಳು ತನ್ನ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅವರ ಮೇಲೆಂದೂ ಒತ್ತಡ ಹೇರಿದ ಉದಾಹರಣೆಗಳಿಲ್ಲ. ಹೀರುವಾಗ ತನ್ನನ್ನು ಕೋಮುವಾದಿ ಎಂದು ಗುರುತಿಸುವುದು, ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿ ಕೊನೆ ಕ್ಷಣದಲ್ಲಿ ತಪ್ಪಿಸಿಕೊಳ್ಳುವುದು ಎಷ್ಟು ಸರಿ ಎಂದವರು ಪ್ರಶ್ನಿಸಿದರು.

ಈ ಭಾರಿಯ ಸಮ್ಮೇಳನ ಯಶಸ್ವಿಯಾಗಿಸಲು ಏನೆಲ್ಲಾ ಪ್ರಯತ್ನ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ನುಡಿಸಿರಿಗೆ ಹಿರಿಯರು ಯುವಕರು ಹಾಗೂ ಮಕ್ಕಳನ್ನು ಆಕರ್ಷಿಸುವ ಒಂದು ಪ್ರಯತ್ನ ಇದ್ದೇ ಇದೆ. ವಸತಿ, ಊಟೋಪಚಾರ ಹಾಗೂ ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇವೆ. ಇದು ನಿಂತ ನೀರಾಗಬಾರದು ಎಂಬ ಕಾರಣಕ್ಕೆ ಒಂದಿಲ್ಲೊಂದು ಹೊಸ ಪ್ರಯತ್ನವನ್ನು ಮಾಡುತ್ತಿದ್ದೇವೆ. ಕಾರ್ಯಕ್ರಮಗಳ ರೂಪುರೇಷೆ ಆಳ್ವಾಸ್ ಸಂಸ್ಥೆಯಿಂದ ಮಾತ್ರ ನಿರ್ಧರಿತಗೊಳ್ಳುವುದಲ್ಲ. ಎಲ್ಲರ ಒಟ್ಟೂ ನಿರ್ಧಾರ ಇದರ ಹಿಂದಿದೆ. ಇಲ್ಲಿಗೆ ಬರುವವರಲ್ಲಿ ಸಾರ್ಥಕತೆಯ ಭಾವ ಮೂಡಿದರೇ ಅದೇ ನುಡಿಸಿರಿಯ ಯಶಸ್ಸು ಎಂದರು.

ನುಡಿಸಿರಿ ಸಾಕೆನಿಸಿದೆಯೇ ಎಂಬ ಪ್ರಶ್ನೆಗೆ ನುಡಿಸಿರಿ ನಿರಂತರವಾಗಿರಬೇಕು ಎಂಬ ಆಶಯ ನಮ್ಮದು. ಹನ್ನೆರಡು ವರ್ಷಗಳಿಂದಲೂ ನುಡಿಸಿರಿ, ವಿರಾಸತ್, ಮಕ್ಕಳ ದತ್ತು ಸ್ವೀಕಾರ ಎಲ್ಲವೂ ನನ್ನ ಬದುಕಿನ ಅವಿಭಾಜ್ಯ ಅಂಗದಂತೆ ಮುಂದುವರಿದು ಬಂದಿದೆ. ಇದು ಹೇಗೆ ನಡೆಸುತ್ತಾರೆಂಬುದರ ಬಗ್ಗೆ ಹಲವರಲ್ಲಿ ಮೂಡಿರುವ ಸಂಶಯದಲ್ಲಿ ಅರ್ಥವಿಲ್ಲ ಎಂದೆನಿಸುತ್ತದೆ. ನಮಗೆ ಬರುವ ಆದಾಯದಲ್ಲಿ ಸ್ವಲ್ಪ ಸ್ವಲ್ಪವನ್ನೇ ಕೂಡಿಟ್ಟುಕೊಂಡು ನಡೆಸುತ್ತಿದ್ದೇವೆ ಎಂದರು.

ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಸರಕಾರ ಸಹಭಾಗಿತ್ವ ಯಾಕಿಲ್ಲ ಎಂಬ ಪ್ರಶ್ನೆಗೆ ಸರಕಾರವೆಂಬುದು ಜಿಡ್ಡು ಹಿಡಿದ ವ್ಯವಸ್ಥೆ. ತನಗೆ ಖಾಸಗೀಕರಣದಲ್ಲಿ ಒಲವು ಹೆಚ್ಚು. ಖಾಸಗೀಕರಣಗೊಳಿಸಿ ಜನರ ರಕ್ತ ಹೀರುವ ಕೆಲಸಕ್ಕೆ ಕೈಹಾಕದೇ ಇಂದಿಗೂ ಮೌಲ್ಯಗಳೊಂದಿಗೆ ಮುನ್ನಡೆಯುತ್ತಿದ್ದೇನೆ. ತನ್ನ ಸಂಪರ್ಕದಲ್ಲಿ ಹಲವಾರು ರಾಜಕಾರಣಿಗಳಿದ್ದರೂ ಅವರ ಸಹಕಾರ ಕೋರಿಲ್ಲ. ನುಡಿಸಿರಿ ಆರಂಭದ ದಿನಗಳಲ್ಲಿ ದಿವಂಗತ ವಿ. ಎಸ್. ಆಚಾರ್ಯ 2ಲಕ್ಷ ನೀಡಿದ್ದು, ಬಳಿಕ ಅದು 5ಲಕ್ಷಕ್ಕೆ ಏರಿದ್ದು, ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಟ್ಟು ಕಾರ್ಯಕ್ರಮಕ್ಕೆ 25ಲಕ್ಷ ದೊರಕಿರುವುದು ಬಿಟ್ಟರೇ ಬೇರಾವ ಸರಕಾರಿ ಅನುದಾನವನ್ನು ಪಡೆದಿಲ್ಲ ಎಂದರು.

Exit mobile version