Kundapra.com ಕುಂದಾಪ್ರ ಡಾಟ್ ಕಾಂ

ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದ ಕುಂದಾಪುರದ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾವ್ಯ ಪಿ. ಶೆಟ್ಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾವ್ಯ ಪಿ.ಶೆಟ್ಟಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾಳೆ.

ಉತ್ತಮ ಅಂಕ ಗಳಿಕೆಯಿಂದ ಸಂತಸಗೊಂಡಿರುವ ಪ್ರಾವ್ಯ ಪಿ. ಶೆಟ್ಟಿ ಮಾತನಾಡುತ್ತಾ “ತನ್ನ ಈ ಉತ್ಕೃಷ್ಟವಾದ ಫಲಿತಾಂಶವನ್ನು ನಾನು ಮೊದಲೇ ನಿರೀಕ್ಷಿಸಿದ್ದೆ. ತನ್ನ ಈ ಸಾಧನೆಗೆ ಶಾಲಾ ಶಿಕ್ಷಕರು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಸಹಕಾರವೇ ಕಾರಣ. ಶಾಲೆಯಲ್ಲಿನ ಅತ್ಯುತ್ತಮವಾದ ಬೋಧನೆ, ನಿರಂತರವಾಗಿ ನಡೆಸುತ್ತಿದ್ದ ಪೂರ್ವ ತಯಾರಿ ಪರೀಕ್ಷೆಗಳು, ಪರೀಕ್ಷಾ ಸಮಯದಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಗಾರಗಳು, ಸಹಪಠ್ಯ ಚಟುವಟಿಕೆಗಳು ತುಂಬಾ ಸಹಾಯವಾಗಿದ್ದು ಉತ್ತಮ ಸಾಧನೆಗೆ ಸಹಾಯವಾಯಿತು. ನಾನು ಹಾಸ್ಟೆಲ್ ನ ವಿದ್ಯಾರ್ಥಿನಿಯಾಗಿದ್ದು ಹಾಸ್ಟೆಲ್ ನ ಸ್ಟಡಿ ಅವರ್ಸ್, ಹಾಸ್ಟೆಲ್ ಶಿಕ್ಷಕರು, ಹಾಸ್ಟೆಲ್ ವಾರ್ಡನ್ ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ವಿಶೇಷವಾಗಿ ನಮ್ಮ ಶಾಲೆಯಲ್ಲಿ ಆರನೇ ತರಗತಿಯಿಂದಲೇ ಬೋಧಿಸುತ್ತಿರುವ ಐಐಟಿ/ನೀಟ್ ಫೌಂಡೇಶನ್ ಕೋರ್ಸ್ ನ ಮಾಸಿಕ ಪರೀಕ್ಷೆಗಳು ಜಟಿಲವಾದ ಪ್ರಶ್ನೆಗಳನ್ನು ಸರಳವಾಗಿ ಉತ್ತರಿಸಲು ನೆರವಾಯಿತು. ಮುಂದೆ ವೈದ್ಯೆಯಾಗಿ ಜನರ ಸೇವೆ ಮಾಡುವ ಆಸೆ ಇದೆ. ಪಿಯುಸಿ ಶಿಕ್ಷಣವನ್ನು ನಮ್ಮದೇ ಸುಜ್ಞಾನ ಪಿಯು ಕಾಲೇಜಿನಲ್ಲಿ ಮುಂದುವರಿಸುತ್ತೇನೆ.” ಎಂದಿದ್ದಾಳೆ.

625ಕ್ಕೆ 622 ಅಂಕ ಗಳಿಸಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿ ಆಯುಷ್ ಯು ಶೆಟ್ಟಿ ಹಾಗೂ 625ಕ್ಕೆ 620 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಅನುಶ್ರೀ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ. ಮತ್ತು  ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ದವರ ಪ್ರಯತ್ನವನ್ನು ಶ್ಲಾಘಿಸಿದರು. ಎಸ್.ಎಸ್.ಎಲ್.ಸಿ.  ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಖಜಾಂಚಿ ಭರತ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.

ಇದನ್ನೂ ಓದಿ ► ಎಸ್.ಎಸ್.ಎಲ್.ಸಿ. ಫಲಿತಾಂಶ – ಕುಂದಾಪುರದ ವಿದ್ಯಾರಣ್ಯ ಶಾಲೆಗೆ ರಾಜ್ಯಮಟ್ಟದಲ್ಲಿ 6 ರ‍್ಯಾಂಕ್‌ – https://kundapraa.com/?p=84853 .

Exit mobile version