Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳದ ಸ್ವರ್ಣಮುಖಿ ವೇದಿಕೆಯಲ್ಲಿ ಮೂರನೇ ವರ್ಷದ ಶ್ರೀ ಶಂಕರ ಜಯಂತ್ಯೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಸಮಾಜದಲ್ಲಿ ಜಾಗೃತಿ ಮೂಡಿಸುವುದರರ ಜೊತೆಯಲ್ಲಿ ಸಮಾಜವು ಒಗ್ಗಟ್ಟಿನಿಂದ ಸಂಘಟಿತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶ್ರೀ ಮೂಕಾಂಬಿಕಾ ಡಿವೂಟೀಸ್ ಟ್ರಸ್ಟ್ (ಕೇರಳ) ತಮ್ಮತನವನ್ನು ಹಾಗೂ ಸನಾತನ ಧರ್ಮ ರಕ್ಷಣೆಯ ಮೂಲಕ ಸ್ವಾಭಿಮಾನಿಯಾಗಿ ಬೆಳೆಯಬೇಕೆನ್ನುವ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಪ್ರಶಾಂತ್ ಹೇಳಿದರು.

ಅವರು ಕೊಲ್ಲೂರು ದೇವಳದ ಸ್ವರ್ಣಮುಖಿ ವೇದಿಕೆಯಲ್ಲಿ ಶ್ರೀ ಮೂಕಾಂಬಿಕಾ ಡಿವೂಟೀಸ್ ಟ್ರಸ್ಟ್ ವತಿಯಿಂದ ನಾಲ್ಕು ದಿನಗಳ ಕಾಲ ಆಯೋಜಿಸಿದ ಮೂರನೇ ವರ್ಷದ ಶ್ರೀ ಶಂಕರ ಜಯಂತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇರಳದ ನಾಲ್ವರು ಮೂಕಾಂಬಿಕಾ ಭಕ್ತರು ಸೇರಿ 2022ರಲ್ಲಿ ಆರಂಭಿಸಿದ ಈ ಸಂಸ್ಥೆಯಲ್ಲಿ ಪ್ರಸ್ತುತ 400ಕ್ಕೂ ಅಧಿಕ ಭಕ್ತಾದಿಗಳು ಸೇರ್ಪಡೆಗೊಂಡಿದ್ದಾರೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಪ್ರತೀ ವರ್ಷ ವಿದ್ಯಾನಿಧಿ ಯೋಜನೆ ಮೂಲಕ ಐದು ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ನೀಡುವುದು, ಸದಸ್ಯರ ಸಮರ್ಪಣಾಭಾವದಿಂದ ಬಡಕುಟುಂಬಗಳಿಗೆ ವಸತಿ, ವಸ್ತ್ರ ಹಾಗೂ ದಿನಸಿಗಳನ್ನು ವಿತರಿಸುವುದು ಇತ್ಯಾದಿ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.

ಧರ್ಮ ಮತ್ತು ಕರ್ಮ ನಮ್ಮ ಸಂಸ್ಥೆಯ ಧ್ಯೇಯವಾಕ್ಯವಾಗಿದ್ದು, ಕೊಲ್ಲೂರು ಕ್ಷೇತ್ರದಲ್ಲಿ ಪ್ರತೀ ತಿಂಗಳು ನವಚಂಡಿಕಾಹೋಮ, ಉದಯಾಸ್ತಮಾನ ಪೂಜೆಯನ್ನು ನೆರವೇರಿಸುತ್ತಾ ಬರಲಾಗುತ್ತಿದೆ. ಪ್ರತೀ ವರ್ಷ ಶ್ರೀ ಮೂಕಾಂಬಿಕಾ ಜನ್ಮದಿನೋತ್ಸವ, ಶ್ರೀ ಶಂಕರ ಜಯಂತಿ ಆಚರಿಸಲಾಗುತ್ತಿದೆ.

ಈ ಸಂದರ್ಭ ನಮ್ಮ ಪ್ರಾಯೋಜಕತ್ವದಲ್ಲಿ ಕೇರಳದ ಸುಮಾರು 500ಕ್ಕೂ ಮಿಕ್ಕಿ ಕಿರಿಯ, ಹಿರಿಯ ಭರತನಾಟ್ಯ ಕಲಾವಿದರು ಇಲ್ಲಿಗೆ ಬಂದು ತಮ್ಮ ನೃತ್ಯ ಪ್ರದರ್ಶನ ನೀಡುತ್ತಾರೆ. ಈ ರೀತಿಯಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಸಾಧ್ಯವಾದಷ್ಟರ ಮಟ್ಟಿಗೆ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜೀವನದ ಸಾರ್ಥಕ್ಯ ಕಾಣುತ್ತಿದ್ದೇವೆ ಎಂದರು.

ಇಲ್ಲಿನ ಮೂಕಾಂಬಿಕಾ ಪರಿಸರ ಸಂರಕ್ಷಣಾ ಸಮಿತಿಯ ಸಹಯೋಗದಲ್ಲಿ ಸ್ವಚ್ಛ ಹಾಗೂ ಸುರಕ್ಷ ಕೊಲ್ಲೂರು ಮತ್ತು ಕೊಡಚಾದ್ರಿ ಅಭಿಯಾನ ಆರಂಭಿಸಲಾಗುತ್ತಿದೆ. ಕ್ಷೇತ್ರದ ಭದ್ರತಾ ನೆಲೆಯಲ್ಲಿ ಸಿಸಿ ಕ್ಯಾಮೆರಾ, ಅಗತ್ಯ ಸ್ಥಳಗಳಲ್ಲಿ ಬ್ಯಾರಿಕ್ಯಾಡ್ ಅಳವಡಿಸಲಾಗುತ್ತದೆ. ಹಾಗೂ ಹಾಲ್ಕಲ್‌ನಿಂದ ಕೊಲ್ಲೂರು ತನಕ ಸ್ವಚ್ಛತಾ ಬ್ಯಾನರ್‌ಗಳನ್ನು ಹಾಕುವ ಮೂಲಕ ಪ್ರವಾಸಿಗರಿಗೆ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಗುರುವಾಯುರಪ್ಪ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ. ಲಕ್ಷ್ಮೀ ಶಂಕರ್, ಕ್ಲಾಸಿಕಲ್ ನೃತ್ಯ ಹಾಗೂ ಚಲನಚಿತ್ರ ಕಲಾವಿದೆ ಮೇಥಿಲ್ ದೇವಿಕಾ, ಟ್ರಸ್ಟ್‌ನ ಕಾರ್ಯದರ್ಶಿ ಶೀಮಾ ಶಶಿಧರನ್, ಕೊಲ್ಲೂರು ದೇವಳದ ಅರ್ಚಕರಾದ ಡಾ. ಕೆ. ಎನ್. ನರಸಿಂಹ ಅಡಿಗ, ಕೆ. ಎನ್. ಸುಬ್ರಹ್ಮಣ್ಯ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಭಿಲಾಷ್ ಪಿ. ವಿ., ಎಎಸ್‌ಐ ಅಣ್ಣಪ್ಪ ನಾಯ್ಕ್ ಉಪಸ್ಥಿತರಿದ್ದರು.      

Exit mobile version