Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ ಸಬ್‌ ಸ್ಟೇಷನ್‌ ತಾಂತ್ರಿಕ ದೋಷ ವಿದ್ಯುತ್‌ ಕಡಿತಕ್ಕೆ ಕಾರಣ. ಶೀಘ್ರ ನಿವಾರಣೆಗೆ ಕ್ರಮ. ಗ್ಯಾರಂಟಿ ಸಭೆಯಲ್ಲಿ ಸ್ಪಷ್ಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯುತ್ ಲೋಡ್ ಶೆಡ್ಡಿಂಗ್ ಆಗುತ್ತಿರುವ ಬಗ್ಗೆ  ಮೆಸ್ಕಾಂ ಉಪಕೇಂದ್ರದಲ್ಲಿ ತಲೆದೂರಿದ ತಾಂತ್ರಿಕ ಸಮಸ್ಯೆಯನ್ನು ತಿಳಿಯಪಡಿಸುವ ಕೆಲಸ ಮಾಡಬೇಕು. ಜನರಿಗೆ ತೊಂದರೆಯಾಗದಂತೆ ನಿರ್ದಿಷ್ಟ ಸಮಯದ ಮಿತಿಯಲ್ಲಿ ಅಧಿಕಾರಿಗಳೂ ಪರಿಹಾರ ಕಂಡಕೊಳ್ಳಲು ಮುಂದಾಗಬೇಕು. ಸರಕಾರದ ಬಗ್ಗೆ ಇದರಿಂದ ತಪ್ಪು ಅಭಿಪ್ರಾಯ ಬರುವಂತೆ ಮಾಡಬೇಡಿ. ಜೊತೆಗೆ ಜನಪ್ರತಿನಿಧಿಗಳು ವಾಸ್ತವ ಅರಿಯದೇ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಈ ಬಗ್ಗೆ ಸಭೆಯಲ್ಲಿದ್ದ ಬೈಂದೂರು ಮೆಸ್ಕಾಂ ಉಪಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹರೀಶ್ ಅವರು ಸ್ಪಷ್ಟನೆ ನೀಡಿ, ಬೈಂದೂರು ಹಾಗೂ ಕೊಲ್ಲೂರು ಮೆಸ್ಕಾಂ ಉಪಕೇಂದ್ರಗಳಿಗೆ ವಿದ್ಯುತ್‌ ಸರಬರಾಜು ಮಾಡುವ ನಾವುಂದದ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಷನ್‌ನಲ್ಲಿನ 20ಎಂವಿಎ ಟ್ರಾನ್ಸಫಾರ್ಮರಿನಲ್ಲಿ ವಾರದ ಹಿಂದೆ ತಾಂತ್ರಿಕದೋಷ ಕಂಡುಬಂದ ಕಾರಣ ಕುಂದಾಪುರ ಸಬ್‌ಸ್ಟೇಷನ್‌ನಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹೆಚ್ಚುವರಿ ಲೋಡ್‌ನಿಂದಾಗಿ ಟ್ರಿಪ್‌ ಆಗುತ್ತಿದ್ದು, ಬೈಂದೂರು ಹಾಗೂ ಕೊಲ್ಲೂರು ಭಾಗಗಳಲ್ಲಿ ಕೆಲವು ದಿನಗಳಿಂದ ವಿದ್ಯುತ್‌ನಲ್ಲಿ ವ್ಯತ್ಯಯವಾಗುತ್ತಿದೆ. ಈಗಾಗಲೇ ಟ್ರಾನ್ಸಫಾರ್ಮರ್ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಒಂದೆರೆಡು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಹೇಳಿದರು.

ಬೈಂದೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಹುತೇಕ ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಿ ಅದರ ಉದ್ಘಾಟನೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಗ್ರಾಮೀಣ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.

ಬೈಂದೂರು ತಾಲೂಕಿನಲ್ಲಿ ಪಂಚ ಗ್ಯಾರೆಂಟಿಗೆ 182.43 ಕೋಟಿ ರೂ. ವೆಚ್ಚ:
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಬೈಂದೂರು ತಾಲೂಕಿಗೆ ಇದುವರೆಗೆ ಸುಮಾರು 182.43 ಕೋಟಿ ರೂ. ವೆಚ್ಚಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಜನವರಿವರೆಗೆ 96.61ಕೋಟಿ ಜಮಾ ಆಗಿದೆ. 48 ಫಲಾನುಭವಿಗಳಿಗೆ ಆಧಾರ್ ಬ್ಯಾಂಕಿಂಗ್ ಮ್ಯಾಪಿಂಣ್ ಬಾಕಿ, ತಾಂತ್ರಿಕ ಕಾರಣದಿಂದಾಗಿ 479 ಹಾಗೂ 71 ಹೊಸ ನೋಂದಾವಣೆ ಸೇರಿದಂತೆ ಒಟ್ಟು 616 ಫಲಾನುಭವಿಗಳಿಗೆ ಬಾಕಿಯಿದೆ.

ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ಉಪಕೇಂದ್ರ ವ್ಯಾಪ್ತಿಯ 27,942ಕುಟುಂಬಗಳಿಗೆ 34.54 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1935ಕುಟುಂಬಗಳಿಗೆ 2.23 ಕೋಟಿ ರೂ. ಸೇರಿದಂತೆ ಸುಮಾರು 36.78ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,182 ಪಡಿತರ ಚೀಟಿಗಳಿಗೆ 1,89,26,610 ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಯುವ ನಿಯೋಜನೆಯಡಿ 340 ಫಲಾನುಭವಿಗಳಿಗೆ 59.34ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 1.36ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು 48.44ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ಡಾ. ರವಿಕುಮಾರ್ ಹುಕ್ಕೇರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ರಾಮ ಪೂಜಾರಿ, ಅನೀಶ್ ಪೂಜಾರಿ, ರಾಘವೇಂದ್ರ ಬಿಲ್ಲವ, ಗುಲಾಬಿ, ಸೂರ್ಯಕಾಂತಿ ಡಿ, ಗಣೇಶ ಗಾಣಿಗ, ಅಣ್ಣಪ್ಪ ಶೆಟ್ಟಿ, ದೇವದಾಸ್ ವಿ.ಜೆ., ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್, ಮೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಅಕಾರಿಗಳು ಉಪಸ್ಥಿತರಿದ್ದರು.

Exit mobile version