ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ರ ಸಂಯೋಜನೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಟೇಶ್ವರ ಇವರ ಸಹಭಾಗಿತ್ವದಲ್ಲಿ ಹೆಚ್‌ಐವಿ/ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ತಾಲೂಕು ಆರೋಗ್ಯ ಕೇಂದ್ರ ಹಾಗೂ ಆಪ್ತ ಸಮಾಲೋಚಕರುರಾದ ನಳಿನಾಕ್ಷಿ ಅವರು ಮಾತನಾಡಿ, ರೋಗ ಲಕ್ಷಣಗಳ ಕುರಿತಾದ ತಿಳಿವಳಿಕೆ ರೋಗಮುಕ್ತ ಸಮಾಜದ ನಿರ್ಮಾಣಕ್ಕೆ ಅಡಿಪಾಯ. ವಿದ್ಯಾರ್ಥಿ ದೆಸೆಯಲ್ಲಿ ಆಕರ್ಷಣೆಗಳಿಗೆ ಬಲಿಯಾಗದೆ ನೈತಿಕ ಶುದ್ಧಿಯುಳ್ಳ ಜೀವನವನ್ನು ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು. ಲೈಂಗಿಕ ಶಿಕ್ಷಣದ ಜ್ಞಾನ, ಸವಾಲಿನ ಸಂದರ್ಭದಲ್ಲಿ ಧೃತಿಗೆಡದ ಆತ್ಮವಿಶ್ವಾಸ ಅತಿ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಜೈನ್ ಅವರು ವೈಯಕ್ತಿಕ ಜೀವನದಲ್ಲಿ ಪಾಳಿಸಬೇಕಾದ ಆರೋಗ್ಯ ಪೂರ್ಣ ಹವ್ಯಾಸಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರಾಮರಾಐ ಆಚಾರ್ಯ ವಹಿಸಿ, ಕಾರ್ಯಕ್ರಮದಲ್ಲಿ ತಿಳಿಸಿದ ಸಂಗತಿಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸುವುದು ಅಗತ್ಯ ಎಂದರು.
ಘಟಕ 1 ರ ಸಂಯೋಜನಾಧಿಕಾರಿ ರೋಹಿಣಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಮತ್ತು ಸ್ಥಳೀಯ ಆಶಾ ಕಾರ್ಯಕರ್ತೆಯಾದ ಸುರೇಖಾ ಮತ್ತು ಮಲ್ಲಿಕಾ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ನಿರಂಜನ ಶರ್ಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು ಸ್ವಯಂ ಸೇವಕರಾದ ದೀಪಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿದರು, ಅಕ್ಷಯ ವಂದಿಸಿದರು.

