Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಳಾವರ ವರದರಾಜ ಎಂ. ಶೆಟ್ಟಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಸಿಂಚನ ಅಂತರ್ ತರಗತಿ ಪ್ರತಿಭಾ ಸ್ಪರ್ಧೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಪ್ರಸ್ತುತ ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ಗುರು ಮುಖೇನ ಸರಿಯಾದ ಜ್ಞಾನಾರ್ಜನೆಯೊಂದಿಗೆ ಲಭ್ಯ ಅವಕಾಶಗಳ ಸದ್ಬಳಕೆಯಿಂದ ತಮ್ಮ ಕೌಶಲ್ಯ, ಪ್ರತಿಭೆಯನ್ನು ಪರಿಶ್ರಮ, ನಿಷ್ಠೆಯಿಂದ ಉದ್ದೀಪನಗೊಳಿಸಿಕೊಂಡರೆ ತಾವುಗಳಿಸಿದ ವಿದ್ಯೆಯ ವರ್ಚಸ್ಸು ಅಧಿಕವಾಗುತ್ತದೆ ಎಂದು ಉಡುಪಿ ಆಕಾಶ್ ಇನ್‌ಸ್ಟಿಟ್ಯೂಟ್ ಹಿರಿಯ ಉಪನ್ಯಾಸಕ ಹಾಗೂ ಖ್ಯಾತ ಯಕ್ಷಗಾನ ಕಲಾವಿದರಾದ ಡಾ. ಪ್ರದೀಪ ವಿ. ಸಾಮಗ ನುಡಿದರು

ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿ ಪ್ರತಿಭಾ ದಿನಾಚರಣೆ ಸಿಂಚನ ಅಂತರ್ ತರಗತಿ ಪ್ರತಿಭಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಸ್ತು ಬದ್ಧರಾಗಿ ಉತ್ಸಾಹದಿಂದ ಆಲಿಸುವ ಮನೋಭಾವ ಹಾಗೂ ಸುಸಂಸ್ಕೃತ ನಡವಳಿಕೆ ಹೊಂದುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು. ಪಠ್ಯದೊಂದಿಗೆ ಪಠ್ಯ ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ಕೃಷ್ಠ ಜೀವನ ಮೌಲ್ಯಗಳನ್ನು ರೂಢಿಸಿಕೊಂಡರೆ ಉಜ್ವಲ ಭವಿಷ್ಯ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ  ಮಾತನಾಡಿ, ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ಉತ್ತಮ ಹವ್ಯಾಸಗಳನ್ನು ಹೊಂದಿ ಬಾಳಪಯಣದಲ್ಲಿ ಯಶಸ್ಸಿನ ಶಿಖರವನ್ನು ತಲುಪಬೇಕೆಂದರು.

ವಿದ್ಯಾರ್ಥಿ ಕ್ಷೇiಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತೃತೀಯ ಬಿ.ಕಾಂ. ನ ಕಾವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಸಾಂಸ್ಕೃತಿಕ ಸಂಚಾಲಕರಾದ ಡಾ. ಭಾಗೀರಥಿ ನಾಯ್ಕ ಸ್ವಾಗತಿಸಿ, ಕೊನೆಯಲ್ಲಿ ಸಾಸ್ಕೃತಿಕ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಸ್ವರ್ಣಿತಾ ಅಂತಿಮ ಬಿ.ಎಸ್ಸಿ. ವಂದಿಸಿದರು.

ಆಂಗ್ಲಭಾಷಾ ಪ್ರಾಧ್ಯಾಪಕ ನಿರಂಜನ ಶರ್ಮ ಅತಿಥಿ ಪರಿಚಯ ಮಾಡಿದರು. ಕನ್ನಡ ಉಪನ್ಯಾಸಕಿ ಪ್ರೇಮಲಾಕ್ಷಿ ಕೆ.ಬಿ. ನಿರ್ಣಾಯಕರನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ವೇತಾ ಕುಮಾರಿ ನಿರೂಪಿಸಿದರು.

ಬೆಸೆಂಟ್ ಮಹಿಳಾ ಕಾಲೆಜು ಮಂಗಳೂರು ಇಲ್ಲಿನ ಕನ್ನಡ ಪ್ರಾಧ್ಯಾಪಕ ಡಾ. ಗಿರಿಯಪ್ಪ, ಉಪನ್ಯಾಸಕರಾದ ಅಮಿತ ಕ್ರಮದಾರಿ ಹಾಗೂ ವಿದುಷಿ ಅರ್ಪಿತಾ ಹೆಗಡೆ ನಿರ್ಣಾಯಕರಾಗಿ ಆಗಮಿಸಿದ್ದರು. ಎಂ.ಕಾಂ. ತರಗತಿ, ತೃತೀಯ ಬಿ.ಕಾಂ. ಎ, ಬಿ.ಸಿ.ಎ. ತರಗತಿಯವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸಮಗ್ರ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Exit mobile version