Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಅದ್ದೂರಿ ಜಾನಪದ ಉತ್ಸವ ನಡೆಯಿತು.

ಶಾಸಕ ಗುರುರಾಜ ಗಂಟಿಹೊಳೆ ಅವರು ಕರಾವಳಿಯಲ್ಲಿ ಸುಗ್ಗಿ ಕೊಯ್ಲಿನ ಬಳಿಕ, ಆಚರಿಸುವ ಹೊಲಿ ಪೂಜೆ, ತಿರಿ ಪೂಜೆ ನೆರವೇರಿಸಿ, ತೆಂಗಿನ ಸಿರಿ ಅರಳಿಸುವ ಮೂಲಕ ಜಾನಪದ ಉತ್ಸವ ಉದ್ಘಾಟಿಸಿದರು.

ಅವರುಬಳಿಕ ಮಾತನಾಡಿ, ಸರಕಾರಿ ಕಾಲೇಜಿನಲ್ಲಿ ಸಂಭ್ರಮದಿಂದ ಆಯೋಜಿಸಿರುವ ಜಾನಪದ ಉತ್ಸವ ನಿಜಕ್ಕೂ ಶ್ಲಾಘನೀಯ, ಕಾಲೇಜಿನ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಕಾರ್ಯ ಕ್ರಮ. ಇಲ್ಲಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಇಡೀ ಕಾಲೇಜಿಗೆ ಹಬ್ಬದ ಕಳೆ ಬಂದಿದೆ ಎಂದರು.

ಕಾಲೇಜಿನ ಗೋಡೆಯು ಜಾನಪದ ಶೈಲಿಯ ವರ್ಲಿ ಕಲೆಯನ್ನು ವೀಕ್ಷಿಸಿ ಚಿತ್ರ ಬಿಡಿಸಿದ ವಿದ್ಯಾರ್ಥಿ ಆದಿತ್ಯ, ತಂಡ, ಪ್ರಾಧ್ಯಾಪಕ ವೃಂದಕ್ಕೆ ಅಭಿನಂದಿಸಲಾಯಿತು.

ಪ್ರಾಂಶುಪಾಲ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಸಿಡಿಸಿ ಸದಸ್ಯ ಗಿರೀಶ್ ಬೈಂದೂರು, ಸುರಭಿ ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ, ಹಳೆ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ಮುತ್ತಯ್ಯ ಪೂಜಾರಿ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿ ದಾರ್, ಪ್ರಸಾದ್ ಪ್ರಭು ಉದ್ಯಮಿಗಳು ಶಿರೂರು, ಪಿ. ಸುಧಾಕರ ನಿರ್ದೇಶಕರು ಸುರಭಿ ಉಪಸ್ಥಿತರಿದ್ದರು.

ಜಾನಪದ ಉತ್ಸವದ ಉಸ್ತುವಾರಿ ಡಾ. ಶಿವಕುಮಾರ ಪಿವಿ ಪ್ರಾಸ್ತಾವಿಕ ಮಾತನಾಡಿದರು. ಹರ್ಷಿತಾ ಮತ್ತು ಸಂಗೀತಾ ಪ್ರಾರ್ಥಿಸಿದರು. ವಿದ್ಯಾರ್ಥಿ ಅಕ್ಷತಾ ಎಲ್. ಹಾಗೂ ನಾಗೇಂದ್ರ ನಿರೂಪಿಸಿ, ವಿದ್ಯಾರ್ಥಿ ರಾಯಭಾರಿ ಸುಹರ್ಷಿಣಿ ಸ್ವಾಗತಿಸಿ, ವಿದ್ಯಾರ್ಥಿ ರಾಯಭಾರಿ ಆದಿತ್ಯ ಮತ್ತ ಸಾಂಸ್ಕೃತಿಕ ಕಾವ್ಯದರ್ಶಿ ಮಂಜುನಾಥ ಡಿ. ವಂದಿಸಿದರು.

ಜಾನಪದ ಉತ್ಸವದ ವಿಶೇಷತೆ:
ಅತಿಥಿಗಳನ್ನು ಚಂಡೆಮೇಳದೊಂದಿಗೆ ಪೂರ್ಣಕುಂಭ ಮೂಲಕ ಸ್ವಾಗತಿಸಲಾಯಿತು. ಅಡಿಕೆ ಮರ ಮತ್ತು ತೆಂಗಿನ ಮಡ್ಲುಗಳಿಂದ ವಿದ್ಯಾರ್ಥಿಗಳೇ ಮಾಡಿದಆಕರ್ಷಕ ಸ್ವಾಗತ ಗೋಪುರ, ಮುಳಿ ಹುಲ್ಲಿನ ಚಪ್ಪರ, ಕರವಾಳಿ ಶೈಲಿಯ ಸುಗ್ಗಿ ಕೊಯ್ಲಿನ ನಂತರದ ಹೊಲಿ ಪೂಜೆ, ತಿರಿ ಪೂಜೆ, ಹಡಿ ಮಂಚ ಪೂಜೆ, ಬೈಂದೂರಿನ ಜನಪದರ ಕೃಷಿ ಸಲಕರಣೆಗಳು, ಮೀನುಗಾರಿಕೆ ಹಾಗೂ ಮನೆಗಳಲ್ಲಿ ನಿತ್ಯ ಬಳಕೆಯಲ್ಲಿದ್ದ ಪುರಾತನ ವಸ್ತುಗಳ ಪ್ರದರ್ಶನ, ವರ್ಲಿ ಚಿತ್ರದಿಂದ ಅಲಂಕೃತಗೊಂಡ ಗೋಡೆ ಎಲ್ಲರ ಗಮನ ಸೆಳೆಯಿತು.

ಕಾಲೇಜು ಮಾವಿನ ತೋರಣ ಹಾಗೂ ಹೂವಿನಿಂದ ಮಧುಮಗಳಂತೆ ಸಿಂಗಾರಗೊಂಡಿತ್ತು. ಅಡಿಕೆ, ಬಾಳೆ, ತೆಂಗು, ಮಾವಿನ ಎಲೆ-ಗರಿಗಳು, ಎತ್ತಿನ ಗಾಡಿಯ ಚಕ್ರಗಳಿಂದ ರೂಪುಗೊಂಡ ಭವ್ಯವಾದ ಬಯಲು ವೇದಿಕೆ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಸಾಂಪ್ರದಾಯಿಕ ವೇಷಭೂಷಣ ವಿಶೇಷವಾಗಿತ್ತು.

ವಿದ್ಯಾರ್ಥಿಗಳಿಗೆ ಜಾನಪದ ಗೀತೆ, ಜಾನಪದ ನೃತ್ಯ ಸ್ಪರ್ಧೆ, ಯಕ್ಷಗಾನ, ನಡಿಗೆಯ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಜಾನಪದ ಶೈಲಿಯ ಚೆನ್ನೆಮಣೆ, ಕುಂಟೆ ಬಿಲ್ಲೆ, ಚೌಕಬಾರಾ, ಲಗೋರಿ, ಬುಗುರಿ ಆಟಗಳನ್ನು ಏರ್ಪಡಿಸಲಾಗಿತ್ತು.

ಇಲ್ಲಿನ ಜನರ ಬದುಕಿನೊಂದಿಗೆ ಬೆಸೆದಿರುವ ಕಡಲ ಕಿನಾರೆ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸಿ ಸಂರಕ್ಷಿಸುವುದು ಈ ಉತ್ಸವದ ಸದುದ್ದೇಶ – ನಾಗರಾಜ ಶೆಟ್ಟಿ ಪ್ರಾಂಶುಪಾಲ

Exit mobile version