Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಉಚಿತ ರಂಗ ರಂಗು ರಜಾ ಮೇಳ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸಮುದಾಯ ಸಾಂಸ್ಕೃತಿಕ ಸಂಘಟನೆ ಹಲವಾರು ವರ್ಷಗಳಿಂದ ಸರಕಾರಿ ಶಾಲೆ ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ರಂಗ ರಂಗು ರಜಾ ಮೇಳವನ್ನು ಹಮ್ಮಿಕೊಂಡು ಬರುತ್ತಿದೆ. ಆ ಮೂಲಕ ತನ್ನ ಸಾಮಾಜಿಕ ಬದ್ಧತೆಯನ್ನು ಪಾಲಿಸುತ್ತಿದೆ. ಇಂತಹ ರಂಗ ಶಿಬಿರದಲ್ಲಿ ವಿದ್ಯಾರ್ಥಿಗಳ ಕಲಿಕೆ ಸಹಜವಾಗಿ ಅರಳುತ್ತದೆ ಅಲ್ಲದೆ ಸದಾ ನೆನಪಿನಲ್ಲಿ ಉಳಿಯುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕೆ, ಸ್ವಯಂಶಿಸ್ತು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿ  ಮಕ್ಕಳ ಮುಂದಿನ ಸಾಧನೆಗೆ ದಾರಿ ಮಾಡಿಕೊಡುತ್ತದೆ ಎಂದು ಕುಂದಾಪುರದ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಕೆ. ಆರ್. ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಅವರು ಹಮ್ಮಿಕೊಂಡಿದ್ದ ಉಚಿತ ರಂಗ ರಂಗು ರಜಾ ಮೇಳ ಉದ್ಘಾಟಿಸಿ ಮಾತನಾಡಿದರು.

ರಜಾ ಮೇಳದಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಹಿರಿಯ ಮೇಲ್ವಿಚಾರಕಿ ಸುಜಯಾ ಅವರು ರಂಗ ರಂಗು ರಜಾ ಮೇಳಕ್ಕೆ ಶುಭ ಹಾರೈಸಿದರು. 

ಸಮುದಾಯದ ಸದಸ್ಯರು  ಅಲ್ಲದೇ ಸಂಪನ್ಮೂಲ ವ್ಯಕ್ತಿಗಳಾದ ಅಶೋಕ್ ತೆಕ್ಕಟ್ಟೆ, ಚಿನ್ನಾ ಗಂಗೇರ, ಅಕ್ಷರ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ರವಿ ವಿಎಂ., ಸಮುದಾಯದ ಹಿರಿಯ ಸಂಗಾತಿಗಳಾದ ಉತ್ಕಲ ಅಶ್ವತ್ ಕುಮಾರ್,  ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಮುದಾಯ ಕುಂದಾಪುರದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರು ಸಮುದಾಯದ ಕಾರ್ಯ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಸಮುದಾಯದ ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ತಿಮ್ಮಪ್ಪ ಗುಲ್ವಾಡಿ ವಂದಿಸಿದರು.

ಕಾರ್ಯಕ್ರಮದಲ್ಲಿ  ಮಕ್ಕಳು ಅವರ ಪೋಷಕರು ಕುಂದಾಪುರ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಅಧಿಕಾರಿ ವರ್ಗದವರು ಸಮುದಾಯದ ಸದಸ್ಯರು ಭಾಗವಹಿಸಿದ್ದರು.

Exit mobile version