Kundapra.com ಕುಂದಾಪ್ರ ಡಾಟ್ ಕಾಂ

ನುಡಿಸಿರಿಯಲ್ಲಿ ಎಳೆ ಮನಸ್ಸುಗಳ ಗಣನೀಯ ಸೇವೆಯ ಗರಿ

ಡಾ. ಮೋಹನ್ ಆಳ್ವರೇ ಹೇಳುವಂತೆ ನುಡಿಸಿರಿಯಲ್ಲಿ ಕಾಣದ ಸಾವಿರಾರು ಕೈಗಳ ಪರಿಶ್ರಮವಿದೆ. ನಾಡಿನ ಮೂಲೆಮೂಲೆಗಳಿಂದ ಈ ಸಾಹಿತ್ಯ ಜಾತ್ರಗೆ ಆಗಮಿಸುವ ಸಾಹಿತ್ಯಾಭಿಮಾನಿಗಳೆಲ್ಲರೂ ಇಲ್ಲಿನ ಯಾವುದೇ ಅಚ್ಚುಕಟ್ಟಾದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿಯೇ ಹೋಗುತ್ತಾರೆ. ಇದಕ್ಕೆ ಮೂಲ ಕಾರಣವೊಂದೇ ತಮಗೆ ವಹಿಸಿದ ಕೆಲಸವನ್ನು ಒಂದಿನಿತೂ ಲೋಪವಾಗದ ರೀತಿಯಲ್ಲಿ ಚಾಚೂ ತಪ್ಪದೆ ಪಾಲಿಸುತ್ತಿರುವವರು ಇಲ್ಲಿರುವ ಸ್ವಯಂಸೇವಕರು. ಒಂದರ್ಥದಲ್ಲಿ ಇವರೇ ನುಡಿಸಿರಿಯ ನಿಜವಾದ ರೂವಾರಿಗಳು ಎಂದರೂ ತಪ್ಪಾಗದು.

ದಿನಂಪ್ರತಿ ನಡೆಯುವ ಸಭಾ ಕಾರ್ಯಕ್ರಮಗಳ ಆಸನ ವ್ಯವಸ್ಥೆ, ನೋಂದಣಿ, ವೇದಿಕೆ ಸಿದ್ಧತೆಗೆ ಸಹಕಾರ, ಮಾಧ್ಯಮ ಪ್ರತಿನಿಧಿಗಳಿಗೆ ಸಹಕಾರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟ, ಉಪಾಹಾರವನ್ನು ಬಡಿಸುವ, ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಅಲ್ಲಲ್ಲಿ ಜನಸಂದಣಿ ನಿರ್ವಹಣೆ ಹೀಗೆ ಕೆಲವು ಮಹತ್ತರವಾದ ಜವಾಬ್ಧಾರಿಗಳನ್ನು ಈ ನಮ್ಮ ಸ್ವಯಂಸೇವಕರು ಬಹಳ ನಿಷ್ಠೆಯಿಂದ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರ್ವಹಿಸುತ್ತಿದ್ದಾರೆ.

ಆಳ್ವಾಸ್‌ನ ವಿವಿಧ ಕಾಲೇಜುಗಳ ಎನ್.ಎಸ್.ಎಸ್, ಎನ್‌ಸಿಸಿ, ರೋವರ್‍ಸ್-ರೇಂಜರ್‍ಸ್ ವಿದ್ಯಾರ್ಥಿಗಳೂ ಸೇರಿದಂತೆ ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳ ಸುಮಾರು ಇಪ್ಪತ್ತು ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿರುವ ಒಂದು ಸಾವಿರಕ್ಕೂ ಮಿಕ್ಕಿ ಎನ್‌ಎಸ್‌ಎಸ್ ಸ್ವಯಂಸೇವಕರು ನುಡಿಸಿರಿಯಲ್ಲಿ ಎಲೆಮರೆಯ ಕಾಯಿಗಳಂತೆ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

‘ಪದವಿ ವಿದ್ಯಾರ್ಥಿಗಳಿಗೆ ಈಗ ಪರೀಕ್ಷಾ ಸಮಯವಾದುದರಿಂದ ಈ ಬಾರಿ ಕೇವಲ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಆದರೂ ಹದಿನೈದು, ಹದಿನಾರರ ಹರೆಯದ ಎಳೆಯ ಮನಸ್ಸುಗಳು ಮಹತ್ತರವಾದ ಜವಾಬ್ಧಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವುದನ್ನು ಕಂಡರೆ ತುಂಬಾ ಖುಷಿಯಾಗುತ್ತದೆ’ ಎನ್ನುತ್ತಾರೆ. ನುಡಿಸಿರಿಯ ಸ್ವಯಂಸೇವಕರ ಮೇಲ್ವಿಚಾರಣೆ ಮಾಡುತ್ತಿರುವ ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಚಂದ್ರಶೇಖರ ಗೌಡ, ಗುರುದೇವ್ ಎನ್ ಮತ್ತು ಸಂತೋಶ್ ಇವರೊಂದಿಗೆ ಜಿಲ್ಲೆಯ ವಿವಿಧ ಪ.ಪೂ ಕಾಲೇಜುಗಳ ಹದಿನೈದು ಯೋಜನಾಧಿಕಾರಿಗಳು ತಮ್ಮ ಸಹಕಾರವನ್ನು ನೀಡುತ್ತಿದ್ದಾರೆ.

‘ನಾವು ಬೇರೆ ಬೇರೆ ಕಾಲೇಜುಗಳ ಸ್ವಯಂಸೇವಕರು ಇಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ನಮ್ಮ ಫ್ರೆಂಡ್‌ಶಿಪ್ ಹೆಚಾಗುತ್ತಿದೆ. ಅಲ್ಲದೆ ಒಂದು ಕಾರ್ಯಕ್ರಮ ಏರ್ಪಡಿಸುವುದರ ಹಿಂದಿನ ಶ್ರಮದ ಅರಿವಾಗುತ್ತಿದೆ. ನಾವೆಲ್ಲಾ ಒಟ್ಟಾಗಿ ಖುಷಿಯಿಂದ ಕೆಲಸ ಮಾಡುವುದರಿಂದ ಇದು ಕಷ್ಟ ಎಂದೆನಿಸುವುದೇ ಇಲ್ಲ. ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡ್ತಾ ಇರ್‍ತೇವೆ’ ಎನ್ನು ತ್ತಾರೆ ಉಜಿರೆ ಶ್ರೀ ಧ.ಮಂ. ಪ.ಪೂ ಕಾಲೇಜಿನ ರಾ.ಸೇ.ಯೋ. ಸ್ವಯಂಸೇವಕಿ ನಿಶ್ಚಿತಾ.
ಮನೆಯಲ್ಲಿ ತಮ್ಮ ತಟ್ಟೆಗಳನ್ನೂ ತೊಳೆಯದ ಪುಟ್ಟ ಕೈಗಳು ಇಲ್ಲಿ ಸಹಸ್ರಾರು ಜನರಿಗೆ ದಾಸೋಹವನ್ನೀಯುತ್ತಿವೆ. ದಿನಂಪ್ರತಿ ಮೂವತ್ತು ಸಾವಿರಕ್ಕೂ ಹೆಚ್ಚು ಜನರ ಸೇವೆಯಲ್ಲಿ ನಿರತವಾಗಿವೆ. ಬೆಳಗ್ಗಿನಿಂದ ಸಂಜೆಯವರೆಗೂ ಎಡಬಿಡದೆ ಒಂದಲ್ಲಾ ಒಂದು ಕಾರ್ಯದಲ್ಲಿ ನಮ್ಮದೇ ಮನೆಯ ಕೆಲಸವೆಂಬಂತೆ ಮಗ್ನವಾಗಿವೆ. ಅದರಲ್ಲಿಯೇ ತೃಪ್ತಿಯನ್ನು ಕಾಣುವ ಮೂಲಕ ಶ್ರಮ ಏವ ಜಯತೆ ಎಂಬುದನ್ನು ಕಾರ್ರ್‍ಅರೂಪಕ್ಕಿಳಿಸಿವೆ. ಈ ಸ್ವಯಂಸೇವಕ ಮುಗ್ಧ ಮನಸ್ಸುಗಳು.

– ಅಪರ ಉಜಿರೆ

Exit mobile version