Site icon Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳು ಲಭ್ಯ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 35,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಬಿತ್ತನೆಗೆ ಪೂರ್ವಸಿದ್ಧತಾ ಕ್ಷೇತ್ರ ಮಟ್ಟದಲ್ಲಿ ಪ್ರಗತಿಯಲ್ಲಿರುತ್ತದೆ. ಕೃಷಿ ಇಲಾಖೆಯಿಂದ ರೈತರಿಗೆ ಅವಶ್ಯವಿರುವ ಎಂ.ಓ-4 ತಳಿಯ ಬಿತ್ತನೆ ಬೀಜವನ್ನು ಜಿಲ್ಲೆಯ 9 ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನೀಕರಿಸಲಾಗಿದ್ದು, ಸಹಾಯಧನದಲ್ಲಿ ರೈತರು ಪಡೆದುಕೊಳ್ಳಬಹುದಾಗಿದೆ.

ಜಿಲ್ಲೆಗೆ ಮುಂಗಾರು ಹಂಗಾಮಿಗೆ ಅಂದಾಜು 2,500 ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜದ ಅವಶ್ಯಕತೆಯಿದ್ದು, ಈಗಾಗಲೇ 2,800 ಕ್ವಿಂಟಾಲ್ ಎಂ.ಓ-4 ಬಿತ್ತನೆ ಬೀಜ ಸರಬರಾಜಿಗೆ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, 1,696 ಕ್ವಿಂಟಾಲ್ ಎಂ.ಓ-4 ಬಿತ್ತನೆ ಬೀಜವನ್ನು ರೈತ ಸಂರ್ಪಕ ಕೇಂದ್ರಗಳಲ್ಲಿ ದಾಸ್ತಾನೀಕರಿಸಲಾಗಿದೆ.

ಬಿತ್ತನೆ ಬೀಜವನ್ನು ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆ.ಜಿಗೆ ರೂ. 8 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಪ್ರತಿ ಕೆ.ಜಿಗೆ ರೂ. 12 ರ ಸಹಾಯಧನದಲ್ಲಿ ಒದಗಿಸಲಾಗುತ್ತಿದೆ. ಪ್ರಸ್ತುತ 1058 ಮಂದಿ ರೈತರಿಗೆ 475 ಕ್ವಿಂಟಾಲ್ ಬಿತ್ತನೆ ಬೀಜವನ್ನು ವಿತರಿಸಲಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಹಂತಹಂತವಾಗಿ ಬಿತ್ತನೆ ಬೀಜವನ್ನು ದಾಸ್ತಾನೀಕರಿಸಿ ಪೂರೈಸಲಾಗುವುದು. ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 5750 ಕ್ವಿಂಟಾಲ್‌ನಷ್ಟು ಎಂ.ಓ-4 ಬಿತ್ತನೆ ಬೀಜ ದಾಸ್ತಾನಿದ್ದು, ಯಾವುದೇ ರೀತಿಯ ಕೊರತೆ ಇರುವುದಿಲ್ಲ.

ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಪ್ರತಿ ಎಕರೆಗೆ 25 ಕೆ.ಜಿಯಂತೆ ಗರಿಷ್ಟ 5 ಎಕರೆಗೆ ಅಥವಾ ವಾಸ್ತವಿಕ ಹಿಡುವಳಿಗೆ ಅನುಗುಣವಾಗಿ ಸಹಾಯಧನದಲ್ಲಿ ಬಿತ್ತನೆ ಬೀಜವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Exit mobile version