Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಶ್ರೀ ರಾಮ ಮಂದಿರದಲ್ಲಿ ಮೀನುಗಾರರ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ

oplus_0

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಮ್ಮ ಜೀವವನ್ನೇ ಪಣಕ್ಕಿಟ್ಟು ಸಮುದ್ರವನ್ನೇ ನಂಬಿ ಜೀವನ ನಡೆಸುತ್ತಿರುವ ಮೀನುಗಾರರ ಮಕ್ಕಳು ಮೀನುಗಾರರಾಗದೆ, ಉನ್ನತ ಶಿಕ್ಷಣ ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಮೀನುಗಾರರ ಮಕ್ಕಳು ಶಿಕ್ಷಣ ವಂಚಿತರಾಗದೆ, ಶಿಕ್ಷಣ ಪಡೆಯಲು ಯಾವುದೇ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಮರವಂತೆ ಪರಿಸರದ ದುಡಿಯುವ ಮೀನುಗಾರ ಮಕ್ಕಳಿಗೆ ಉಚಿತವಾಗಿ ಪ್ರತಿವರ್ಷ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ವಿದ್ಯಾವಂತರಾಗಿ ಸಮಾಜಕ್ಕೆ ಕೊಡುಗೆಗಳಾಗಬೇಕು ಎಂದು ಮರವಂತೆ ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಸುರೇಶ ಖಾರ್ವಿ ಹೇಳಿದರು.

ಅವರು ಮರವಂತೆ ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ವತಿಯಿಂದ ಮರವಂತೆ ಶ್ರೀ ರಾಮ ಮಂದಿರದಲ್ಲಿ ಭಾನುವಾರ ಜರಗಿದ 11ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮರವಂತೆ ಭಾಗದ ಮೀನುಗಾರ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

ಮೀನುಗಾರರ ಮಾರ್ಕೇಟಿಂಗ್ ಸಮಿತಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ಸೇವಾ ಸಮಿತಿ ಕಾರ್ಯದರ್ಶಿ ಶೇಖರ ಖಾರ್ವಿ, ಮಾಜಿ ಅಧ್ಯಕ್ಷ ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ, ಮಹಾಬಲ ಖಾರ್ವಿ, ಸೇವಾ ಸಮಿತಿ ಪದಾಧಿಕಾರಿಗಳು, ಮೀನುಗಾರರು, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮರವಂತೆ ಪರಿಸರದ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

Exit mobile version