Kundapra.com ಕುಂದಾಪ್ರ ಡಾಟ್ ಕಾಂ

ಮುಂಗಾರು ಪೂರ್ವದಲ್ಲಿ ಮಳೆ ಅಬ್ಬರ. ಜನಜೀವನ ಅಸ್ತವ್ಯಸ್ತ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಜಿಲ್ಲಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಸೋಮವಾರ ರಾತ್ರಿ ಲಘುವಾಗಿ ಆರಂಭಗೊಂಡ ಮಳೆ ಮಂಗಳವಾರ ಹಾಗೂ ಗುರುವಾರ ಬೆಳಗ್ಗಿನಿಂದ ಎಡೆಬಿಡದೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಎಡಬಿಡದೆ ಸುರಿದ ಮಳೆ ಮಧ್ಯಾಹ್ನದ ಬಳಿಕ ವಿರಾಮದಲ್ಲಿ ಬಿಳತೊಡಗಿತ್ತು. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ನಿರಂತರ ಮಳೆಯಾಗಿದೆ.

ಕುಂದಾಪುರದಲ್ಲಿ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳು ನೀರುಮಯವಾಗಿದ್ದು ಸುಗಮ ವಾಹನ ಸಂಚಾರಕ್ಕೆ ಅಡೆತಡೆ ಎದುರಾಗಿದೆ. ಬಸ್ರೂರು ಮೂರುಕೈ ಬಳಿ ಹಾಗೂ ಟಿಟಿ ರಸ್ತೆ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ಅಡೆಚಣೆ ಉಂಟಾಯಿತು. ತೆಕ್ಕಟ್ಟೆ ಜಂಕ್ಷನ್‌ನಲ್ಲಿ ಹೆದ್ದಾರಿ ಬದಿ ಹೊಳೆಯಂತಾಗಿದ್ದು ಕುಂದಾಪುರ ವಿನಾಯಕ ಪ್ರೈವುಡ್ ಅಂಗಡಿ ಎದುರು ಸರ್ವಿಸ್ ರಸ್ತೆ ಮಳೆ ನೀರಿನಲ್ಲಿ ಮುಳುಗಡೆಯಾಗಿದೆ.

ಬೈಂದೂರು-ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೊಲ್ಲೂರು ದೇವಸ್ಥಾನ ಎದುರು ಹಾದು ಹೋಗುತ್ತಿದ್ದು ಇಲ್ಲಿ ನಡೆಯುತ್ತಿರುವ ಅವೈಜ್ಞಾನಿಕ, ನಿಧಾನಗತಿ ಕಾಮಗಾರಿಯಿಂದಾಗಿ ವಾಹನ ಸವಾರರು ಮತ್ತು ಭಕ್ತಾಧಿಗಳು ಪರಿತಪಿಸುವಂತಾಗಿದೆ. ದೇವಸ್ಥಾನದ ಎದುರೆ ನೂರಾರು ಮೀಟರ್ ಕಾಮಗಾರಿ ಅಪೂರ್ಣ ಗೊಳಿಸಿದ್ದು ಮಂಗಳವಾರ ಮಳೆ ಯಿಂದಾಗಿ ಸುಗಮ ಸಂಚಾರಕ್ಕೆ ಬಾರೀ ಅಡಚಣೆ ಉಂಟಾಗಿತ್ತು. ಅಲ್ಲದೆ ದೇವಸ್ಥಾನಕ್ಕೆ ಸಾಗುವ ಅನತಿ ದೂರದಲ್ಲಿರುವ ಸೇತುವೆ ಸಮೀಪ ಹೆದ್ದಾರಿಯಲ್ಲೆ ಹೊಳೆಯಂತೆ ನೀರು ನಿಂತು ಸಮಸ್ಯೆಯಾಗಿತ್ತು.

ಉಡುಪಿ ಜಿಲ್ಲೆಯಲ್ಲಿ ಸರಾಸರಿ 32.9 ಮೀ.ಮೀ ಮಳೆಯಾಗಿದ್ದು, ಈ ಪೈಕಿ ಕಾರ್ಕಳ ತಾಲೂಕಿನಲ್ಲಿ 72.6,  ಕುಂದಾಪುರ ತಾಲೂಕಿನಲ್ಲಿ 6.6, ಉಡುಪಿ ತಾಲೂಕಿನಲ್ಲಿ 60.5, ಬೈಂದೂರು ತಾಲೂಕಿನಲ್ಲಿ 9.7, ಬ್ರಹ್ಮಾವರ ತಾಲೂಕಿನಲ್ಲಿ 18.6, ಕಾಪು ತಾಲೂಕಿನಲ್ಲಿ 76.3, ಹೆಬ್ರಿ ತಾಲೂಕಿನಲ್ಲಿ 21.6 ಮಿ.ಮೀ ಮಳೆಯಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂಗಾರು ಕೃಷಿಗೆ ಸಿದ್ಧತೆ ನಡೆಸುತ್ತಿರುವ ರೈತರಲ್ಲಿ ಉತ್ಸಾಹ ಮೂಡಿಸಿದೆ. ಧಾರಣೆ ಕುಸಿತದಿಂದ ಕಂಗೆಟ್ಟಿರುವ ಕಲ್ಲಂಗಡಿ ಬೆಳೆಗಾರರಿಗೆ ಮಳೆ ಹೊಡೆತ ನೀಡಿದೆ. ಕಲ್ಲಂಗಡಿಗೆ ಬೆಳೆಗೆ ಮಳೆ ಕಂಟಕ ವಾಗಿದ್ದು, ಬೆಳೆಗಾರರು ಆತಂಕಿತರಾಗಿದ್ದಾರೆ.

ಮುಂದಿನ 2 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಹವಾಮಾನ ಮನ್ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಲಾಗಿದೆ.

Exit mobile version