Site icon Kundapra.com ಕುಂದಾಪ್ರ ಡಾಟ್ ಕಾಂ

ದೇಸಿ ತಳಿಗಳ ಸಂರಕ್ಷಣೆ, ಉತ್ತೇಜನ ಕಾರ್ಯಕ್ರಮ: ನೋಂದಣಿಗೆ ಅವಕಾಶ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಉತ್ತೇಜನ ನೀಡಲು ಕೃಷಿ ಇಲಾಖೆಯು ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸ್ಥಳೀಯ ತಳಿಗಳು ಅಥವಾ ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ಅಭಿವೃದ್ಧಿ ನಿರ್ವಹಿಸಲ್ಪಡುವ ತಳಿಗಳು ದೇಸಿ ತಳಿಗಳೆಂದು ಕರೆಯಲ್ಪಡುತ್ತವೆ. ಇವು ರೈತರ ಸಾಂಪ್ರದಾಯಿಕ, ಪರಂಪರೆ, ಜಾನಪದ ಪ್ರಭೇದಗಳಾಗಿರುತ್ತವೆ. ಈ ತಳಿಗಳಲ್ಲಿರುವ ವಿಶಿಷ್ಟ ಗುಣಲಕ್ಷಣಗಳು ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ವೈಜ್ಞಾನಿಕವಾಗಿ ಅಭಿವೃದ್ದಿಪಡಿಸಲಾದ ಅಧಿಸೂಚಿತ ಪ್ರಭೇದಗಳಿಗಿಂತ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ದವಾಗಿವೆ. ಆದರೆ ಕೆಲವೇ ರೈತರು ಮಾತ್ರವೇ ಇಂತಹ ದೇಸಿ ತಳಿ ಕೃಷಿ ಮಾಡುವುದನ್ನು ಮುಂದುವರೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖಾ ವತಿಯಿಂದ ದೇಸಿ ತಳಿಗಳ ಸಂರಕ್ಷಣೆಗಾಗಿ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ.

ಈ ಉತ್ತೇಜನ ಕಾರ್ಯಕ್ರಮದಡಿ ಕಣ್ಮರೆಯಾಗುತ್ತಿರುವ ತಳಿಗಳನ್ನೊಳಗೊಂಡಂತೆ ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳ ಗುರುತಿಸುವಿಕೆ ಹಾಗೂ ಸಂರಕ್ಷಿಸುವುದು, ಗುರುತಿಸಿದ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸುವುದು, ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ, ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಡಿ ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂಡೆ ಹಾಗೂ ಸಲಹಾ ಸಮಿತಿಯು ಶಿಫಾರಸ್ಸು ಮಾಡುವ ಇತರೆ ಬೆಳೆಗಳನ್ನು ಆಯ್ಕೆ ಮಾಡಲಾಗಿದೆ.

ದೇಸಿ ತಳಿಗಳನ್ನು ಸಂರಕ್ಷಿಸಿ ಮತ್ತು ಬೆಳೆಸುವ ಮೂಲಕ ಕೃಷಿ ಪರಂಪರೆಯನ್ನು ಮುಂದುವರೆಸುತ್ತಿರುವ ರೈತರನ್ನು ಗುರುತಿಸುವುದು ಮತ್ತು ಉತ್ತೇಜಿಸುವುದು ಅಗತ್ಯವಿರುವುದನ್ನು ಮನಗಂಡು ದೇಸಿ ತಳಿಗಳ ನಿರಂತರ ಕೃಷಿಯನ್ನು ಪೋತ್ಸಾಹಿಸಲು, ಜೀವ ವೈವಿಧ್ಯತೆಯನ್ನು ಬೆಂಬಲಿಸಲು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಪೋಷಿಸಲು ಈ ಉತ್ತೆಜನ ಕಾರ್ಯಕ್ರಮ ಅನುಷ್ಟಾನಗೊಳಿಸಲಾಗುತ್ತಿದೆ.

ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಬೆಂಬಲ ಹಾಗೂ ಪ್ರೋತ್ಸಾಹ ಪಡೆಯಲಿಚ್ಛಿಸುವ ರೈತರು ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜವನ್ನು ನೀಡಲು ಸಿದ್ಧರಿರಬೇಕು. ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಪುನರುತ್ಪಾದಕ ಕೃಷಿ ಮತ್ತು ಇತರೆ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರಬೇಕು. ಇಂತಹ ದೇಸಿ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರು ತಮ್ಮ ವಿವರವನ್ನು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಾಯಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

Exit mobile version