ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರಳುಗಾರಿಕೆಗೆ ಬಳ್ಕೂರು ಉಪ್ಪು ನೀರು ಸಂಗ್ರಹ ಆಣೆಕಟ್ಟು ಮತ್ತು ಕಂಡ್ಲೂರು ಸೇತುವೆ ನಡುವೆ ಅವಕಾಶ ನೀಡಬಾರದು ಎಂದು ಬಸ್ರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಆಗೃಹಿಸಿದ್ದಾರೆ.
ಬಳ್ಕೂರು ಬಳಿ ವರಾಹಿ ನೀರಾವರಿ ನಿಗಮದಿಂದ ನಿರ್ಮಾಣಗೊಂಡಿರುವ ಉಪ್ಪು ನೀರು ತಡೆ ಆಣೆಕಟ್ಟುವಿನಿಂದ ಕುಂದಾಪುರ ಪುರಸಭೆ ಮಾತ್ರವಲ್ಲದೆ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳಿಗೆ ಶುದ್ಧ ಕುಡಿಯುವ ಸಿಹಿ ನೀರು ದೊರಕುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಭಾಗದಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದಲ್ಲಿ ಈ ಉಪ್ಪು ನೀರು ತಡೆ ಆಣೆಕಟ್ಟುವಿನ ಸ್ವಯಂ ಚಾಲಿತ ಗೇಟ್ ಹಾಗೂ ಪಿಲ್ಲರ್ ಗಳಿಗೆ ಹಾನಿಯಾಗಲಿದೆ. ಹಾಗೂ ಈ ಆಣೆಕಟ್ಟುವಿನ ಮೇಲ್ಬಾಗದಲ್ಲಿ ಕಂಡ್ಲೂರು ಸೇತುವೆಯಿದ್ದು ಅದು ಈಗಾಗಲೇ ಶಿಥಿಲಗೊಂಡಿದ್ದು ಇಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದರೆ ಈ ಸೇತುವೆ ಕೂಡ ಕುಸಿಯುವ ಭೀತಿಯಿದೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠ ಆಣೆಕಟ್ಟು ಹಾಗೂ ಸೇತುವೆಯ 500 ಮೀಟರ್ ಮೇಲ್ಬಾಗ ಹಾಗೂ ಕೆಳ ಭಾಗದಲ್ಲಿ ಮರಳುಗಾರಿಕೆಗೆ ಅವಕಾಶ ನೀಡಬಾರದು ಎಂದು ಆದೇಶ ಕೂಡ ನೀಡಿದೆ. ಆದುದರಿಂದ ಜನಸಾಮಾನ್ಯರಿಗೆ ಹಾಗೂ ರೈತರಿಗೆ ಅಗತ್ಯವಾಗಿರುವ ಡ್ಯಾಮ್ ಹಾಗೂ ಸೇತುವೆಗೆ ಹಾನಿಯಾಗುವ ಮರಳುಗಾರಿಕೆಗೆ ಸಂಬಂಧಿತ ಇಲಾಖೆಯವರು ಅವಕಾಶ ನೀಡಬಾರದು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.

