Site icon Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲೆಯಲ್ಲಿ ಮುಂದುವರಿದ ಮಳೆಯಾರ್ಭಟ. ಮತ್ತೆರಡು ದಿನ ರೆಡ್‌ ಅಲರ್ಟ್‌ ಮುಂದುವರಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ,ಮೇ.25:
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡ ಅಕಾಲಿಕ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲಾದ್ಯಂತ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ವಿವಿಧ ಗ್ರಾಮಗಳಲ್ಲಿ ಮರಗಳು ಉರುಳಿ ಮನೆ ಹಾಗೂ ಇನ್ನಿತರ ಕಟ್ಟಡಗಳಿಗೆ ಹಾನಿಯಾಗಿದೆ.

ಮಳೆಯಾರ್ಭಟ ಮುಂದುವರಿದಿದ್ದು, ಮೇ.26ರಿಂದ ಮೇ.28ರ ತನಕ ಮತ್ತೆ ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮೂರು ದಿನಗಳ ಕಾಲ ರೆಡ್‌ ಅಲರ್ಟ್‌ ಬಳಿಕ ಮೂರು ದಿನ ಎಲ್ಲೋ ಅಲರ್ಟ್‌ ಘೋಷಿಸಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಅಧಿಕ ಗಾಳಿ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮೇ.24ರಂದು ಕುಂದಾಪುರ ತಾಲೂಕಿನ ಕರ್ಕಂಜೆ, ಬೀಜಾಡಿ, ಸೇನಾಪುರ ಗ್ರಾಮದ ಒಂದೊಂದು ಮನೆಯು ಗಾಳಿ ಹಾಗೂ ಮರಬಿದ್ದು ಹಾನಿಯಾಗಿದ್ದರೇ, ಕುಂದಾಪುರ ಪುರಸಭಾ ವ್ಯಾಪ್ತಿಯ 2 ಮನೆಗಳು, ಹಾರ್ದಳ್ಳಿ ಮಂಡಳ್ಳಿ ಗ್ರಾಮದಲ್ಲಿ 2 ಮನೆಗಳು ಮರ ಬಿದ್ದು ಹಾನಿಯಾಗಿದೆ. ಬೈಂದೂರು ತಾಲೂಕಿನ ಯಳಜಿತ್‌, ಶಿರೂರು ಗ್ರಾಮದಲ್ಲಿ ಒಂದೊಂದು ಮನೆಗಳಿಗೆ ಮರಬಿದ್ದು ಹಾನಿಯಾಗಿದೆ. ಮೇ.23ರಂದು ಕುಂದಾಪುರ ತಾಲೂಕಿನ ಗುಜ್ಜಾಡಿ, ಗಂಗೊಳ್ಳಿ, ಮೊಳಹಳ್ಳಿ, ಬಸ್ರೂರು, ಕಂದಾವರ, ವಕ್ವಾಡಿ, ಗುಲ್ವಾಡಿ, ಕೊರ್ಗಿ ಗ್ರಾಮದಲ್ಲಿ ಕ್ರಮವಾಗಿ ಒಂದೊಂದು ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 76.1 ಮಿ.ಮೀ ಮಳೆಯಾಗಿದ್ದು, ಕಾರ್ಕಳದಲ್ಲಿ 53.6 ಮಿ.ಮೀ, ಕುಂದಾಪುರದಲ್ಲಿ 68.2 ಮಿ.ಮೀ, ಉಡುಪಿಯಲ್ಲಿ 80.9 ಮಿ.ಮೀ, ಬೈಂದೂರಿನಲ್ಲಿ 83.9 ಮಿ.ಮೀ, ಬ್ರಹ್ಮಾವರದಲ್ಲಿ 93.3 ಮಿ.ಮೀ, ಕಾಪುದಲ್ಲಿ 48.9 ಮಿ.ಮೀ ಮತ್ತು ಹೆಬ್ರಿ ತಾಲ್ಲೂಕುಗಳಲ್ಲಿ 114 ಮಿ.ಮೀ ಮಳೆಯಾಗಿದೆ.

Exit mobile version