Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನೇತ್ರದಾನ ಹಾಗೂ ರಕ್ತದಾನ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಮನುಷ್ಯನು ಹೊಂದಿರುವ ಜ್ಞಾನವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡಾಗ ಆತನಲ್ಲಿನ ಜ್ಞಾನ ವೃದ್ಧಿಸುವ ಹಾಗೆಯೇ ನೆತ್ತರನ್ನು ಕೂಡ ದಾನ ಮಡಿದರೆ ಕ್ಷಣ ಮಾತ್ರದಲ್ಲಿ ದಾನ ನೀಡಿದವನ ದೇಹದಲ್ಲಿ ಮೂರು ಪಟ್ಟು ಹೆಚ್ಚು ಉತ್ಪತ್ತಿಯಾಗುತ್ತದೆ. ಜ್ಞಾನ ದೇಗುಲವಾದರೆ ರಕ್ತ ಜೀವರಕ್ಷಕ ಸಂಜೀವಿನಿ. ಈ ನೆಲೆಯಲ್ಲಿ ಇವೆರಡನ್ನೂ ಕೂಡ ಇನ್ನೊಬ್ಬರಿಗೆ ದಾನ ಮಾಡಬಹುದು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಅವರು ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ದಿ. ನರಸಿಂಹ ರಾಮ ಪ್ರಭು ಜನ್ಮಶತಮಾನೋತ್ಸವ ಪ್ರಯುಕ್ತ ಕಾರ್ಯನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ (ಕಾಂ) ಯೋಜನೆಯಡಿ ನಯನಾ ನೇತ್ರಾಲಯ ಮಂಗಳೂರು ಮತ್ತು ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ನೇತ್ರದಾನ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾನವ ಕುಲಕ್ಕೆ ಸಹಾಯ ಮಾಡುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದ್ದು, ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನವು ಆರೋಗ್ಯ ರಕ್ಷಣೆಯ ಪ್ರಮುಖ ಭಾಗವಾಗಿದ್ದು, ಮತ್ತು ಅನೇಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ರಕ್ತದ ಅವಶ್ಯಕತೆಯಿದೆ. ರಕ್ತ ವರ್ಗಾವಣೆ ಕ್ಷೇತ್ರದಲ್ಲಿ ವಿಜ್ಞಾನವು ಹೆಚ್ಚಿನ ಪ್ರಗತಿ ಸಾಧಿಸಿದ್ದು, ಇದರಿಂದಾಗಿ ಅನೇಕ ಜೀವಗಳನ್ನು ಉಳಿಸಲಾಗಿದೆ ಎಂದರು.

ನೇತ್ರದಾನ ಹಾಗೂ ರಕ್ತದಾನ ಮಾಡಿದವರಿಗೆ ಶ್ರೀಗಳು ಪ್ರಶಂಸನಾ ಪತ್ರ ವಿತರಿಸಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ, ಹೈಕೋರ್ಟ್ ನ್ಯಾಯಾಧೀಶ ಯು. ಗಣೇಶ ಪಡಿಯಾರ್, ದಿ. ನರಸಿಂಹ ರಾಮ ಪ್ರಭು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು. ಸದಾನಂದ ಪ್ರಭು ರಾಯಚೂರು, ಟ್ರಸ್ಟಿಗಳಾದ ಯು. ಅಶೋಕ ಪ್ರಭು, ಯು. ರಾಮಚಂದ್ರ ಪ್ರಭು, ಯು. ದಾಮೋದರ ಪ್ರಭು, ಯು. ಸುಧಾಕರ ಪ್ರಭು ಇದ್ದರು. ನಯನಾ ನೇತ್ರಾಲಯದ ಡಾ. ವಿಷ್ಣು ಪ್ರಭು ಕಾರ್ಯಕ್ರಮ ನಿರ್ವಹಿಸಿದರು. 

Exit mobile version