ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುರಿಯನ್ನು ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನ ಶೀಲರಾಗಿ, ನಿಮ್ಮ ಯಶಸ್ಸಿನ ಮೂಲಕ ಎಲ್ಲ ತೊಂದರೆಗಳು ಮಾಯವಾಗುತ್ತವೆ. ವಿದ್ಯಾರ್ಥಿಗಳೆಲ್ಲರಿಗೂ ಸಮಾನ ಪ್ರತಿಭೆ ಇಲ್ಲದಿರಬಹುದು ಆದರೆ ಸಮಾನ ಅವಕಾಶಗಳಿವೆ. ಕನಸು, ಪ್ರಯತ್ನ, ಸಾಧನೆ – ಇವು ಮೂರನ್ನು ನಿರ್ಲಕ್ಷಿಸದೆ ತಮ್ಮ ಏಳ್ಗೆಗೆ ತಾವೇ ಶಿಲ್ಪಿಗಳಾಗಬೇಕೆಂದು ಕರ್ನಾಟಕ ಬ್ಯಾಂಕ್ ವಿಭಾಗೀಯ ಕಚೇರಿ, ಉಡುಪಿ ಇಲ್ಲಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಾದಿರಾಜ ಕೆ. ಹೇಳಿದರು.
ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ನಡೆದ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಗಣಕಶಾಸ್ತ್ರದ ಪ್ರಯೋಗಾಲಯಕ್ಕೆ ರೂಪಾಯಿ ನಾಲ್ಕು ಲಕ್ಷ ಹತ್ತು ಸಾವಿರ ಮೌಲ್ಯದ ಯುಪಿಎಸ್ ಹಸ್ತಾಂತರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲ ರಾಮರಾಯ ಆಚಾರ್ಯ ಈ ಕಾಲೇಜು ಅನೇಕ ದಾನಿಗಳಿಂದ ಮೂಲಭೂತ ಸೌಲಭ್ಯಗಳನ್ನು ಪಡೆದು ಅತ್ಯುತ್ತಮ ಕಾಲೇಜೆಂದು ಹೆಸರಾಗಲು ಸಹಕರಿಸಿದವರೆಲ್ಲರಿಗೆ ಕೃತಜ್ಞತೆ ಸಲ್ಲಿಸಿದರು.
ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸಾಂಸ್ಕೃತಿಕ ಸಂಚಾಲಕರಾದ ಡಾ. ಭಾಗೀರಥಿ ನಾಯ್ಕ, ಅರಣ್ಯ ಗುತ್ತಿಗೆದಾರ ಜೆ.ಪಿ. ಶೆಟ್ಟಿ ಕಟ್ಕೆರೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಖಾರ್ವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕಿ ಶರಾವತಿ ನಿರೂಪಿಸಿ ಕೊನೆಯಲ್ಲಿ ವಿದ್ಯಾರ್ಥಿ ನಾಯಕ ನಿತಿನ್ ಕುಮಾರ್ ವಂದಿಸಿದರು.

