ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನಪದ ಸಾಹಿತ್ಯ ಮತ್ತು ಕಲೆಗಳು ಜನಮನದ ಜೀವನಾಡಿ. ಇವುಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಡಾ| ಶಿವರಾಮ ಕಾರಂತರು ಕರಾವಳಿಯ ಕಲೆಯಾದ ಯಕ್ಷಗಾನವನ್ನು ಆ ಕಾಲಘಟ್ಟಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುವಂತೆ ಮಾಡಿದರು ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ| ಬಾಲಾಜಿ ಎಸ್. ಹೇಳಿದರು.
ಅವರು ಡಾ| ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ-5 ಮತ್ತು ಜಲಜಾನಪದ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಜಾನಪದ ವಿದ್ವಾಂಸ ಕನರಾಡಿ ವಾದಿರಾಜ ಭಟ್ ಜಲಜಾನಪದ ಪುಸ್ತಕ ಬಿಡುಗಡೆಗೊಳಿಸಿದರು. ಡಾ| ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ| ಗಣನಾಥ ಶೆಟ್ಟಿ ಎಕ್ಕಾರು ಆಶಯ ನುಡಿಗಳನ್ನಾಡಿ ಪುಸ್ತಕ ಪರಿಚಯಿಸಿದರು. ಡಾ| ಶಿವರಾಮ ಕಾರಂತ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಮುಷ್ತಾಕ್ ಹೆನ್ನಾಬೈಲ್ ಡಾ| ಶಿವರಾಮ ಕಾರಂತರ ಬದುಕು ಕೃತಿಗಳು ಮತ್ತು ಪರಿಸರದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭ ಕಾರಂತ ಟ್ರಸ್ಟ್‌ನ ಸದಸ್ಯ ಡಾ| ಪ್ರಸಾದ್ ರಾವ್ ಉಪಸ್ಥಿತರಿದ್ದರು.
ಜಲಜಾನಪದ ಕೃತಿಯ ಸಂಪಾದಕಿ ಡಾ| ಭಾರತಿ ಮರವಂತೆ ಪ್ರಸ್ತಾವಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಸುಕುಮಾರ್ ಶೆಟ್ಟಿ ಕಮಲಶಿಲೆ ನಿರೂಪಿಸಿ, ಕಾಲೇಜಿನ ಉಪ-ಪಾಂಶುಪಾಲರು ಹಾಗೂ ಕಾರಂತ ಟ್ರಸ್ಟ್‌ನ ಸದಸ್ಯ ಸಂಚಾಲಕ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕಿ ರೇಷ್ಮಾ ಶೆಟ್ಟಿ ವಂದಿಸಿದರು.

