Site icon Kundapra.com ಕುಂದಾಪ್ರ ಡಾಟ್ ಕಾಂ

ಪುಸ್ತಕ ಪಾಂಡಿತ್ಯದಷ್ಟೇ ಅನುಭವ ಪಾಂಡಿತ್ಯ ಮುಖ್ಯ: ಜಯಕರ ಶೆಟ್ಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಮರ್ಥ್ಯದ ಹೆಚ್ಚಳಕ್ಕೆ ಉತ್ತಮ ವಾತಾವರಣ, ಸಂಸ್ಕಾರ ಬೇಕು. ಕಲಿಕೆಯ ವಿಷಯವು ಬರಿಯ ತಿಳಿವಳಿಕೆ ಮಾತ್ರವಲ್ಲ, ವಿಷಯವನ್ನು ಅರ್ಥಪೂರ್ಣ ಮಾಡಬಲ್ಲ ವ್ಯಕ್ತಿತ್ವದ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿಯು ಅನ್ಯಥಾ ಯೋಚಿಸದೆ ಪ್ರಸ್ತುತ ಕಲಿಕೆಯಲ್ಲಿ ಗಮನ ಕೇಂದ್ರೀಕರಿಸಿದರೆ ಶ್ರದ್ಧೆ ಮತ್ತು ಆತ್ಮವಿಶ್ವಾಸ  ಉಂಟಾಗಿ ಕಲಿಕೆಯಲ್ಲಿ ಪುಸ್ತಕ ಪಾಂಡಿತ್ಯಕ್ಕಿಂತ ಅನುಭವ ಪಾಂಡಿತ್ಯ ವೃದ್ಧಿಯಾಗುತ್ತದೆ. ತನ್ಮೂಲಕ ಭವಿಷ್ಯ ಉಜ್ವಲವಾಗುತ್ತದೆಂದು ಇಂಡಿಯನ್ ರೆಡ್‌ಕ್ರಾಸ್ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಹೇಳಿದರು.

ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಒಂದು ಲಕ್ಷ ರೂಪಾಯಿ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲ ರಾಮರಾಯ ಆಚಾರ್ಯ ನಮ್ಮ ಬಗ್ಗೆ ನಾವು ಆಲೋಚಿಸುವುದಕ್ಕಿಂತ ಇನ್ನೊಬ್ಬರು ಹೆಚ್ಚು ಆಲೋಚಿಸಿರುತ್ತಾರೆ ಜೊತೆಗೆ ಅವರು ನಿಮಗೆ ಸಹಾಯ ಮಾಡುತ್ತಾರೆ. ಇಂತಹ ಸಹಾಯವನ್ನು ಸದುಪಯೋಗಪಡಿಸಿಕೊಂಡು ಉತ್ಕೃಷ್ಟ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸಾಂಸ್ಕೃತಿಕ ಸಂಚಾಲಕರಾದ ಡಾ. ಭಾಗೀರಥಿ ನಾಯ್ಕ, ಅರಣ್ಯ ಗುತ್ತಿಗೆದಾರ ಜೆ.ಪಿ. ಶೆಟ್ಟಿ ಕಟ್ಕೆರೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಖಾರ್ವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇತಿಹಾಸ ಉಪನ್ಯಾಸಕಿ ಶರಾವತಿ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಸ್ವಾಗತಿಸಿ, ಕೊನೆಯಲ್ಲಿ ವಿದ್ಯಾರ್ಥಿ ನಾಯಕ ನಿತಿನ್ ಕುಮಾರ್ ವಂದಿಸಿದರು. 

Exit mobile version