Site icon Kundapra.com ಕುಂದಾಪ್ರ ಡಾಟ್ ಕಾಂ

ಬಿಜೂರು: ಟ್ರಾಕ್ಟರ್‌ ಗೆ ಸಿಲುಕಿ ಬಾಲಕ ಮೃತ್ಯು

ಬೈಂದೂರು: ಇಲ್ಲಿಗೆ ಸಮೀಪದ ಬಿಜೂರು ಕೃಷಿ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್‌ ಅಡಿಯಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಇಂದು ಸಂಜೆ ನಡೆದಿದೆ. ಬಿಜೂರು ಗ್ರಾಮದ ಕಂಚಿಕಾನ್ ನಾರಂಬಳ್ಳಿಯ ಚಿಕ್ಕಯ್ಯ ಪೂಜಾರಿ ಅವರ ಮಗ ಚೇತನ (9) ನತದೃಷ್ಟ ಬಾಲಕ.

ನಾರಂಬಳ್ಳಿಯ ಚಿಕ್ಕಯ್ಯ ಪೂಜಾರಿ ಹಾಗೂ ಕುಸುಮಾ ದಂಪತಿಯ ಪುತ್ರನಾದ ಚೇತನ್ ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಭಾನುವಾರ ಶಾಲೆ ರಜೆವಿರುವುದರಿಂದ ಮನೆಯ ಸನಿಹದಲ್ಲೇ ಇರುವ ಕೃಷಿ ಗದ್ದೆಗೆ ತೆರಳಿದ್ದ ಎನ್ನಲಾಗಿದೆ. ಅಲ್ಲಿ ಉಳುವೆ ಮಾಡುತ್ತಿದ್ದ ಬಾಡಿಗೆ ಟ್ರಾಕ್ಟರ್‌ ಗೆ ಗದ್ದೆಯಲ್ಲಿ ಬಾಲಕ ಆಕಸ್ಮಿಕವಾಗಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮುಂಬೈ ಹೊಟೇಲ್‌ನ ಕಾರ್ಮಿಕನಾಗಿ ದುಡಿಯುತ್ತಿದ್ದ ತಂದೆ ಚಿಕ್ಕಯ್ಯ ಅವರದ್ದು ಬಡ ಕುಟುಂಬ. ಚಿಕ್ಕ ಮಗುವಿನ ಈ ಆಕಸ್ಮಿಕ ಸಾವು ಕುಟುಂಬದವರನ್ನು ಕಂಗಾಲಾಗಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version