Site icon Kundapra.com ಕುಂದಾಪ್ರ ಡಾಟ್ ಕಾಂ

ಹದಿನೈದು ದಿನಗಳ ಒಳಗಾಗಿ ಏಕವಿನ್ಯಾಸ ನಕ್ಷೆ ಸಮಸ್ಯೆ ಬಗೆಹರಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಜನಸಾಮಾನ್ಯರಿಂದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಏಕ ವಿನ್ಯಾಸ ನಕ್ಷೆಯ ಸಮಸ್ಯೆಗಳ ಬಗ್ಗೆ ದಿನೇ ದಿನೇ ದೂರುಗಳು ಕೇಳಿ ಬರುತ್ತಿದ್ದು, ಇದರಿಂದಾಗಿ ಗೃಹ ನಿರ್ಮಾಣ ಮತ್ತು ಕಟ್ಟಡಗಳನ್ನು ಕಟ್ಟಲು ತೊಂದರೆಯಾಗುತ್ತಿದೆ. ಇದನ್ನು ಹದಿನೈದು ದಿನಗಳ ಒಳಗಾಗಿ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮ ಪಂಚಾಯತ್‌ನಲ್ಲಿ ವಿತರಿಸುತ್ತಿದ್ದ 9/11 ಪ್ರಾಧಿಕಾರಕ್ಕೆ ಪ್ರತ್ಯಾಯೋಜಿಸಿದ ನಂತರ ಕಾರಣವಿಲ್ಲದೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ಅರ್ಜಿದಾರರು ಬೇಸತ್ತು ಹೋಗಿದ್ದಾರೆ. ರಸ್ತೆ ಅಂಚಿನ 6 ಮೀಟರ್ ಬಿಟ್ಟು ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವಂತೆ ಸರ್ಕಾರದ ಸುತ್ತೋಲೆ ಇದ್ದರೂ ಸಹ ಪ್ರಾಧಿಕಾರದ ನಿರ್ಲಕ್ಷತನದಿಂದಾಗಿ ಸಾವಿರಾರು ಕಡತಗಳು ವಿಲೇವಾರಿಯಾಗದೇ ಬಾಕಿ ಇವೆ. ಪ್ರಾಧಿಕಾರದ ಅಧಿಕಾರಿಗಳು 15 ದಿನಗಳ ಒಳಗೆ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದರು.

ಸುತ್ತೋಲೆಯಲ್ಲಿ ಇರುವಂತೆ ನಗರ ಸ್ಥಳೀಯಾಡಳಿತ ಸಂಸ್ಥೆಗಳು ಇರುವ ರಸ್ತೆಗಳು ಅಗಲೀಕರಣಗೊಳ್ಳಲು ಸಾಧ್ಯವಿಲ್ಲವೆಂದು ಪ್ರಸ್ತಾಪನೆ ಕಳುಹಿಸಿದರೆ ಕೇವಲ 3.5 ಮೀಟರ್‌ಗೆ ಅನುಮತಿ ನೀಡುವ ಸರ್ಕಾರದ ಆದೇಶವನ್ನು ಪಾಲಿಸಬೇಕು. ಪ್ರಾಧಿಕಾರದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಕ್ಷಣ ನಿಲ್ಲಿಸಿ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ನಿವಾರಿಸಬೇಕೆಂದು ಸೂಚಿಸಿದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 11,000 ಹೆಚ್ಚು ಅರ್ಜಿಗಳು ಅನುಮೋದನೆಗಾಗಿ ಕಾಯುತ್ತಿದ್ದು, ಇವುಗಳ ತುರ್ತು ವಿಲೇವಾರಿಗೆ ಕೂಡಲೇ ಕ್ರಮ ವಹಿಸುವಂತೆ ತಿಳಿಸಿದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ದೂರದೂರುಗಳಾದ ಕುಂದಾಪುರ ಹಾಗೂ ಬೈಂದೂರಿನಿಂದ ಅರ್ಜಿದಾರರು ನಿತ್ಯ ಪ್ರಾಧಿಕಾರಕ್ಕೆ ಬರುವ ದುಸ್ಥಿತಿ ಬಂದಿದೆ. ಜನಸಾಮಾನ್ಯರ ಸಮಸ್ಯೆಯನ್ನು ಅರಿತು ಅಧಿಕಾರಿಗಳು ತುರ್ತಾಗಿ ಸ್ಪಂದಿಸುವ ಕೆಲಸವಾಗಬೇಕು ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಏಕ ವಿನ್ಯಾಸ ನಕ್ಷೆ ಅನುಮೋದನೆ ಸಮಸ್ಯೆಯಿಂದ ಜಿಲ್ಲಾಡಳಿತಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಬಗ್ಗೆ ತಕ್ಷಣ ಸರಿಪಡಿಸಲು ಕ್ರಮವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ದೂರದೂರಿನಿಂದ ಬರುವ ಅರ್ಜಿದಾರರಿಗೆ ತೊಂದರೆಯಾಗದಂತೆ ಮತ್ತು ಗ್ರಾಮ ಪಂಚಾಯತ್ ಶಿಫಾರಸ್ಸುಗಳಿರುವ ಅರ್ಜಿಗಳನ್ನು ವಿಳಂಬವಾಗದೇ ಅನುಮೋದನೆ ನೀಡಲು ಪ್ರಾಧಿಕಾರಕ್ಕೆ ಸೂಚಿಸಿದರು.

ಸುದೀರ್ಘ ಚರ್ಚೆಯ ನಂತರ ರಸ್ತೆಯ ಅಂಚಿನ 6 ಮೀ ನಿಗಧಿಗೊಳಿಸಿ, ಲೋಕೋಪಯೋಗಿ ಇಲಾಖೆ ಅನುಮತಿ ಪಡೆದು ಕಡತಗಳನ್ನು 15 ದಿನಗಳೊಳಗಾಗಿ ವಿಲೇವಾರಿ ಮಾಡುವುದಾಗಿ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ತಿಳಿಸಿದರು.

ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಆಯುಕ್ತ ಮಹೇಶ್, ಕುಂದಾಪುರ ಹಾಗೂ ಕಾಪು ನಗರ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನವೀನ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜ್ಞಾನಮೂರ್ತಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Exit mobile version