ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ಜೂ. 2 ರಂದು ಶಾಲಾ ಪ್ರಾರಂಭೋತ್ಸವವನ್ನು ಆಹ್ಲಾದಕರವಾಗಿ ಆಚರಿಸಲಾಯಿತು. ತರಗತಿಗಳನ್ನು ತೋರಣ, ದೀಪ, ವಿವಿಧ ಭಿತ್ತಿಚಿತ್ರಗಳಿಂದ ಅಲಂಕರಿಸಿ, ವಿದ್ಯಾರ್ಥಿಗಳನ್ನು ಆರತಿ ಬೆಳಗಿ, ಪುಷ್ಪಾರ್ಚನೆ ನಡೆಸಿ, ತಿಲಕವನ್ನಿಟ್ಟು ತರಗತಿ ಶಿಕ್ಷಕರು ಸ್ವಾಗತಿಸಿದರು. ಮೊದಲ ದಿನವೇ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ಸಲುವಾಗಿ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅವರು ಮಕ್ಕಳನ್ನು ಸ್ವಾಗತಿಸುತ್ತಾ, ಮಕ್ಕಳೇ! ದೀರ್ಘಕಾಲದ ರಜೆಯನ್ನು ಆನಂದಿಸಿ, ಈಗ ನಿಮ್ಮ ಶೈಕ್ಷಣಿಕ ಜೀವನದ ಮುಂದಿನ ಹಂತಕ್ಕೆ ಕಾಲಿಡಲು ಬಂದಿದ್ದೀರಿ. ನಿಮ್ಮ ಪ್ರತಿಭೆಯನ್ನು ಸಮಾಜಮುಖಿಯನ್ನಾಗಿಸಿಕೊಳ್ಳಲು, ನಿಮ್ಮೊಳಗಿನ ಜ್ಞಾನವನ್ನು ಅರಿಯಲು, ಅಂತಃಸತ್ತ್ವವನ್ನು ಬೆಳೆಸಿಕೊಳ್ಳಲು ನೀವಿಲ್ಲಿಗೆ ಆಗಮಿಸಿದ್ದೀರಿ. ಆಂಜನೇಯನಂತೆ ಭಕ್ತಿ, ಶಕ್ತಿ, ಯುಕ್ತಿಗಳನ್ನು ನಾವು ಬಳಸಬೇಕು. ಪಾಲಕರಲ್ಲಿ, ಶಿಕ್ಷಕರಲ್ಲಿ, ದೇಶದಲ್ಲಿ ಭಕ್ತಿಯನ್ನೂ, ಸಹಪಾಠಿಗಳಿಗೆ ಸಹಾಯ ಮಾಡಲು ಶಕ್ತಿಯನ್ನೂ, ಯಶಸ್ಸಿಗಾಗಿ ಯುಕ್ತಿಯನ್ನೂ ಸದಾ ಬಳಸಬೇಕು.
ಜ್ಞಾನದ ಸದುಪಯೋಗದಿಂದ ಕೀರ್ತಿಯನ್ನು ಸಂಪಾದಿಸಬೇಕೇ ವಿನಃ ಅಪಕೀರ್ತಿಯನ್ನಲ್ಲ. ವಿವೇಕಾನಂದರು ತಿಳಿಸಿದಂತೆ ಗುರಿಯನ್ನಿರಿಸಿಕೊಂಡು, ಅದನ್ನು ಮುಟ್ಟುವ ತನಕ ಪ್ರಯತ್ನಿಸಿ, ಸೋಲು ಗೆಲುವಿನ ಮೂಲ. ಸೋಲಿನ ಕಾರಣವನ್ನರಿತು ತಿದ್ದಿಕೊಂಡು ಮುಂದೆ ಸಾಗಬೇಕು. ಅದುವೇ ಸಾಧನೆಗೆ ಮೂಲ.
ಮಹಾಭಾರತದಲ್ಲಿ ಏಕಲವ್ಯನೆಂಬ ಮಹಾನ್ ವ್ಯಕ್ತಿ ತನ್ನ ಗುರುಗಳೆಂದು ದ್ರೋಣಾಚಾರ್ಯರ ಮೂರ್ತಿಯನ್ನಿರಿಸಿಕೊಂಡು, ಪೂಜಿಸಿ, ಗುರುಭಕ್ತಿಯಿಂದ ಸತತ ಪರಿಶ್ರಮದಿಂದ ಅಧ್ಯಯನ ನಡೆಸಿ, ಶ್ರೇಷ್ಠ ಧನುರ್ಧಾರಿಯಾಗಿದ್ದ. ಈ ಶಾಲೆಯಲ್ಲಿ ನಿಮಗೆ ಮಾರ್ಗದರ್ಶಕರಾದ ಯೋಗ್ಯ ಅಧ್ಯಾಪಕವೃಂದವನ್ನೂ, ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಒದಗಿಸಿಕೊಡುತ್ತಿದ್ದೇವೆ. ನಿಮ್ಮ ಪ್ರಯತ್ನದಿಂದ ಶೈಕ್ಷಣಿಕವಾಗಿ ಸಾಧನೆ ನಡೆಸಿದರೆ ಇವೆಲ್ಲ ಸಾರ್ಥಕವಾಗುವವು.
ದೇವನಾದ ಸಿದ್ಧಿವಿನಾಯಕ ಇಂತಹ ಭವ್ಯವಾದ ಸುವ್ಯವಸ್ಥಿತ ಶಾಲೆಯನ್ನೂ ನಿಮಗಾಗಿ ನೀಡಿದ್ದಾನೆ. ಆ ಗಣೇಶನೇ ಹಿಂದೊಮ್ಮೆ ಸಹೋದರನಾದ ಕಾರ್ತಿಕೇಯನ ಜೊತೆ ನಡೆದ ಸ್ಪರ್ಧೆಯಲ್ಲಿ ತನ್ನ ತಂದೆತಾಯಿಯರಿಗೆ ಪ್ರದಕ್ಷಿಣೆ ಬಂದು, ಜಗತ್ತಿನ ಎಲ್ಲಾ ವಸ್ತುಗಳಿಗಿಂತ ಹೆತ್ತು ಹೊತ್ತು ಸಾಕಿ ಸಲಹಿದ ತಂದೆತಾಯಿಯರೇ ಶ್ರೇಷ್ಠ ಎಂದು ದಿವ್ಯ ಸಂದೇಶ ನೀಡಿದ್ದಾನೆ. ಅದರಂತೆ ಹಿರಿಯರನ್ನು ಗೌರವಿಸಿರಿ.
ಈ ಶಾಲೆ ಸತತ 22 ವರ್ಷಗಳಿಂದ 100% ಫಲಿತಾಂಶ ಪಡೆದ ಕುಂದಾಪುರ ತಾಲೂಕಿನ ಏಕೈಕ ಶಾಲೆ. ಇದೆಲ್ಲಕ್ಕೂ ಮಾರ್ಗದರ್ಶಕರು ಇಲ್ಲಿನ ಅಧ್ಯಾಪಕವೃಂದ. ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿದ್ದಾಗ, ಪ್ರೋತ್ಸಾಹಿಸಿ, ದಾರಿ ತಪ್ಪಿದಾಗ ತಿದ್ದಿ ತಿಳಿಹೇಳುವುದು ಅವರ ಕರ್ತವ್ಯ. ಅವರನ್ನು ಗೌರವಿಸುವುದು ನಿಮ್ಮ ಸುಂದರವಾದ ಭವಿಷ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸುತ್ತಾ 2025-26ನೇ ಶೈಕ್ಷಣಿಕ ವರ್ಷದ ಅಧ್ಯಾಪಕ ವೃಂದವನ್ನು ಪರಿಚಯಿಸಿದರು.
ಶಾಲೆಯ ಸಹಸಂಯೋಜಕರಾದ ಲತಾ ದೇವಾಡಿಗ ತಮ್ಮ ಸುಶ್ರಾವ್ಯವಾದ ಗಾಯನದ ಮೂಲಕ ಮುಂದಿನ ಕಲಿಕೆಗೆ ಮಕ್ಕಳಿಗೆ ಸ್ಫೂರ್ತಿ ನೀಡಿದರು. ವಿದ್ಯಾರ್ಥಿಗಳ ಸಮೂಹ ನೃತ್ಯ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು. ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್. ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

