Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರು ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಂದಾಪುರ ತಾಲೂಕು ಆರೋಗ್ಯ ಕೇಂದ್ರದ ಸಿಬ್ಬಂದಿ ಭ್ಯಾಗ್ಯಲಕ್ಷ್ಮೀ ಮಾತನಾಡಿ, ತಂಬಾಕು ಸೇವನೆಯಿಂದ ಕುಟುಂಬ ಸಮಾಜ ಮತ್ತು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ತಂಬಾಕು ಸೇವನೆಯಿಂದ ಆಗುವ ಶ್ವಾಸಕೋಶ, ಧ್ವನಿ ಪೆಟ್ಟಿಗೆ, ಅನ್ನನಾಳ ಹೀಗೆ ಹಲವು ರೀತಿಯ ಕ್ಯಾನ್ಸರ್‌ಗಳಿಗೆ ಕಾರಣವಾಗಿದೆ. ಆದ್ದರಿಂದ  ಯುವ ಜನತೆ ತಂಬಾಕು ಸೇವನೆಯಿಂದ ದೂರವಿರಬೇಕು. ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ತಂಬಾಕು ಸೇವನೆಯ ತೀವ್ರತೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಕ್ಯಾನ್ಸರ್ ಆಸ್ಪತ್ರೆ ಭೇಟಿ ನೀಡಿದರೆ ತಿಳಿಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. 

ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಾದ ಶ್ವೇತಾ ಕಾರ್ಯಕ್ರಮವನ್ನುದ್ದೇಶಿಸಿ ದುಶ್ಚಟ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಕೇಂದ್ರದ ಸಿಬ್ಬಂದಿಯಾದ ಮೋನಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿಶ್ವ ತಂಬಾಕು ರಹಿತ ದಿನ ಪ್ರಯುಕ್ತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಎನ್.ಎಸ್.ಎಸ್ ಘಟಕ ಸಂಯೋಜಕರಾದ ರಾಘವೇಂದ್ರ ಶೆಟ್ಟಿ ಎಸ್. ಧನ್ಯವಾದಗೈದರು.   

Exit mobile version